ದಾಂಡೇಲಿ : ಯಾವುದೇ ಕ್ಷೇತ್ರ ಪ್ರಗತಿಯನ್ನು ಸಾಧಿಸಬೇಕಾದರೆ ವ್ಯವಸ್ಥಿತವಾದ ಮೂಲಸೌಕರ್ಯ ಇರಬೇಕು. ಈ ನಿಟ್ಟಿನಲ್ಲಿ ಹಳಿಯಾಳ, ದಾಂಡೇಲಿ ಮತ್ತು ಜೋಯಿಡಾ ತಾಲೂಕಿನಲ್ಲಿ ವ್ಯವಸ್ಥಿತವಾದ ಮೂಲಸೌಕರ್ಯವನ್ನು ಒದಗಿಸಿಕೊಡಲು ಅತ್ಯಂತ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲಾಗಿದೆ. ಕೈಗಾರಿಕೆ, ಪ್ರವಾಸೋದ್ಯಮ ಹಾಗೂ ಇನ್ನಿತರ ಕ್ಷೇತ್ರಗಳ ಅಭಿವೃದ್ಧಿಗೆ ಉತ್ತಮವಾದ ಮೂಲಸೌಕರ್ಯಗಳು ಬೇಕು. ಆ ರೀತಿಯ ಮೂಲಸೌಕರ್ಯಗಳನ್ನು ಒದಗಿಸಿದ ಪರಿಣಾಮವಾಗಿ ಜೋಯಿಡಾ ಮತ್ತು ದಾಂಡೇಲಿಯಲ್ಲಿ ಪ್ರವಾಸೋದ್ಯಮ ಕ್ಷೇತ್ರ ಶರವೇಗದಲ್ಲಿ ಬೆಳೆಯಲು ಕಾರಣವಾಗಿದೆ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ.ದೇಶಪಾಂಡೆ ಅವರು ಹೇಳಿದರು.
ಅವರು ಗುರುವಾರ ಸಂಜೆ ನಗರದ ಡಿಲಕ್ಸ್ ಭವನದ ಆವರಣದಲ್ಲಿ ಸಮಾನ ಮನಸ್ಕ ಗೆಳೆಯರ ಬಳಗದಿಂದ ಆಯೋಜಿಸಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡುತ್ತಿದ್ದರು. ನನ್ನ ರಾಜಕೀಯ ಗುರು ದಿ: ರಾಮಕೃಷ್ಣ ಹೆಗಡೆಯವರು. ರಾಮಕೃಷ್ಣ ಹೆಗಡೆಯವರ ತತ್ವ, ಸಿದ್ಧಾಂತಗಳನ್ನು ಅನುಸರಿಸಿಕೊಂಡು ಬಂದ ಪರಿಣಾವಾಗಿ ರಾಜಕೀಯವಾಗಿ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಯಿತು. ಬಹಳಷ್ಟು ಮುಖ್ಯಮಂತ್ರಿಗಳ ಜೊತೆ ಕೆಲಸ ಮಾಡಿದ್ದೇನೆ. ರಾಜಕಾರಣಿಯಾದವನಿಗೆ ದೂರದೃಷ್ಟಿ ಬೇಕು. ನಂಬಿಕೆ ಇಟ್ಟು ಮತದಾನ ಮಾಡಿದ ಮತದಾರರ ಸೇವೆಯನ್ನು ನಿಷ್ಠೆಯಿಂದ ಮಾಡಬೇಕು. ಇಂದು ಕಾಲ ಬದಲಾಗಿದೆ. ಜಾತಿ, ಧರ್ಮ, ಹಣದ ಮೇಲೆ ಚುನಾವಣೆ ನಡೆಯುವಂತಾಗಿದೆ. ಕಲುಷಿತಗೊಂಡ ರಾಜಕೀಯ ವ್ಯವಸ್ಥೆಯಿಂದ ಸದೃಢ ಸಮಾಜ ನಿರ್ಮಾಣ ಅಸಾಧ್ಯ. ಈ ನಿಟ್ಟಿನಲ್ಲಿ ಪ್ರಜ್ಞಾವಂತ ಮತದಾರರು ಯಾವುದೇ ಆಮಿಷಕ್ಕೆ ಒಳಗಾಗದೆ ಯೋಗ್ಯ ವ್ಯಕ್ತಿಯನ್ನು ಜನಪ್ರತಿನಿಧಿಯನ್ನಾಗಿ ಆರಿಸಬೇಕೆಂದು ಕರೆ ನೀಡಿದರು. ಈ ಸಭೆಯಲ್ಲಿ ವ್ಯಕ್ತವಾದ ಬೇಡಿಕೆಗಳನ್ನು ಆದ್ಯತೆಯಡಿ ಈಡೇರಿಸಲು ಅಗತ್ಯ ಕ್ರಮವನ್ನು ಕೈಗೊಳ್ಳಲಾಗುವುದು. ಸುದೀರ್ಘವಾಗಿ ಜನರ ಸೇವೆ ಮಾಡಲು ಮಹತ್ವದ ಅವಕಾಶವನ್ನು ಒದಗಿಸಿದ ಕ್ಷೇತ್ರದ ಮತದಾರ ಬಂಧುಗಳ ಪ್ರೀತಿ ವಾತ್ಸಲ್ಯವನ್ನು ಎಂದು ಮರೆಯಲಾಗದು. ಅಧಿಕಾರ, ಅಂತಸ್ತು ಶಾಶ್ವತವಲ್ಲ. ಆದರೆ ನಮ್ಮ ನಡೆ, ನುಡಿ, ವ್ಯಕ್ತಿತ್ವ ಹಾಗೂ ಸಮಾಜಮುಖಿ ಕಾರ್ಯಗಳು ಸದಾ ಸ್ಮರಣೀಯವಾಗಿರುತ್ತದೆ ಎಂದು ಹೇಳಿ ಪ್ರೀತಿಯಿಂದ ಸನ್ಮಾನಿಸಿದ ಸರ್ವರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು.
ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ರಾಜೇಂದ್ರ ಜೈನ್ ಅವರು ಮಾತನಾಡಿ ಆರ್.ವಿ. ದೇಶಪಾಂಡೆ ಅವರಿಗೆ ದೇಶಪಾಂಡೆ ಅವರೇ ಸಾಟಿ. ದೂರದೃಷ್ಟಿ ಇರುವ ಜನಮನದ ನಾಯಕರಾಗಿ ದೇಶಪಾಂಡೆಯವರು ನಿಜಕ್ಕೂ ಅಭಿವೃದ್ಧಿಯ ಹರಿಕಾರರಾಗಿದ್ದಾರೆ. ಕಾಗದ ಕಾರ್ಖಾನೆಯ ಪ್ರಗತಿಯಲ್ಲಿಯೂ ದೇಶಪಾಂಡೆಯವರ ಕೊಡುಗೆ ಅಪಾರವಾಗಿದೆ. ಕ್ಷೇತ್ರದ ಅಭಿವೃದ್ಧಿಗಾಗಿ ದೇಶಪಾಂಡೆ ಅವರು ತಮ್ಮನ್ನು ತಾವು ತೊಡಗಿಸಿಕೊಳ್ಳುವ ರೀತಿ ಅತ್ಯಂತ ಶ್ಲಾಘನೀಯವಾಗಿದೆ ಎಂದರು.
ಹಿರಿಯ ವೈದ್ಯರಾದ ಡಾ.ಜಿ.ವಿ.ಭಟ್ ಅವರು ಮಾತನಾಡಿ, ದೇಶಪಾಂಡೆ ಅವರ ವ್ಯಕ್ತಿತ್ವವೆ ಸಮಾಜಮುಖಿಯಾದ ವ್ಯಕ್ತಿತ್ವ. ದೇವರು ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ವಿಶೇಷ ಶ್ರದ್ಧೆಯನ್ನು ಇಟ್ಟುಕೊಂಡಿರುವ ದೇಶಪಾಂಡೆಯವರು ಶ್ರೀ ಲ.ಸತ್ಯಸಾಯಿ ಮಂದಿರ ಸ್ಥಾಪನೆಗೂ ಬಹುಮೂಲ್ಯ ಕೊಡುಗೆ ನೀಡಿದ್ದಾರೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ.ಎನ್ ವಾಸರೆಯವರು ಮಾತನಾಡಿ ದೇಶಪಾಂಡೆಯವರು ಯಾವುದೇ ಪದವಿಗಾಗಿ ಲಾಭಿ ಮಾಡಿದವರಲ್ಲ. ರಾಜ್ಯದ ವರ್ಚಸ್ವಿ ನಾಯಕರಾದ ದೇಶಪಾಂಡೆಯವರು ಸಚಿವರಾಗಿ ಎಲ್ಲ ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸಿ, ಆ ಎಲ್ಲ ಇಲಾಖೆಗಳಿಗೆ ಶಕ್ತಿ ತುಂಬುವ ಕೆಲಸವನ್ನು ಮಾಡಿದ್ದಾರೆ. ರಾಜ್ಯದಲ್ಲಿ ಕೈಗಾರಿಕಾ ಕ್ಷೇತ್ರದ ಬೆಳವಣಿಗೆಯಲ್ಲಿ ದೇಶಪಾಂಡೆಯವರ ಕೊಡುಗೆ ಮಹತ್ವಪೂರ್ಣವಾಗಿದೆ. ಕ್ಷೇತ್ರದಲ್ಲಿ ಪ್ರವಾಸೋದ್ಯಮ, ಶೈಕ್ಷಣಿಕ, ಆರೋಗ್ಯ ಕ್ಷೇತ್ರ ಮಾತ್ರವಲ್ಲದೆ ಮೂಲಸೌಕರ್ಯ ವೃದ್ಧಿಗೂ ವಿಶೇಷ ಮುತುವರ್ಜಿಯನ್ನು ವಹಿಸಿ ಕೆಲಸ ಮಾಡಿದ ಹೆಗ್ಗಳಿಕೆ ದೇಶಪಾಂಡೆ ಅವರಿಗೆ ಸಲ್ಲಬೇಕು ಎಂದರು.
ಕಾರ್ಯಕ್ರಮದಲ್ಲಿ ಆರ್.ವಿ.ದೇಶಪಾಂಡೆ ಅವರನ್ನು ಸಮಾನ ಮನಸ್ಕ ಗೆಳೆಯರ ಬಳಗದಿಂದ ಹಾಗೂ ವಿವಿಧ ಸಂಘಟನೆಗಳಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಗೆಳೆಯರ ಬಳಗದ ಮೋಹನ್ ಹಲವಾಯಿಯವರು ಸ್ವಾಗತಿಸಿದ ಕಾರ್ಯಕ್ರಮಕ್ಕೆ ಕೀರ್ತಿ ಗಾಂವಕರ್ ವಂದಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು.