ಎರಡು ವರ್ಷದ ನಾಯಕತ್ವ ಪೂರ್ಣಗೊಳಿಸಿದ ವಿಜಯೇಂದ್ರ: ಬಿಜೆಪಿ ಹಿರಿಯರಿಂದ ವಿಶೇಷ ಸನ್ಮಾನ

ಬೆಂಗಳೂರು (ನ.16): ಬಿಜೆಪಿ ರಾಜ್ಯಾಧ್ಯಕ್ಷರಾಗಿ ಎರಡು ವರ್ಷ ಪೂರೈಸಿದ ಬಿ.ವೈ. ವಿಜಯೇಂದ್ರ ಅವರನ್ನು ಪಕ್ಷದ ಹಿರಿಯ ನಾಯಕರು ಆತ್ಮೀಯವಾಗಿ ಸನ್ಮಾನಿಸಿ ಶುಭಾಶಯ ಕೋರಿದರು. ಪಕ್ಷದ ರಾಜ್ಯ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್, ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಕೋರ್ ಕಮಿಟಿ ಸದಸ್ಯ ಬಿ. ಶ್ರೀರಾಮುಲು, ವಿಧಾನಸಭೆ ಮುಖ್ಯ ಸಚೇತಕ ದೊಡ್ಡನಗೌಡ ಎಚ್. ಪಾಟೀಲ್ ಸೇರಿದಂತೆ ಹಲವು ಪ್ರಮುಖ ನಾಯಕರು ಭಾಗವಹಿಸಿ ವಿಜಯೇಂದ್ರ ಅವರಿಗೆ ಗೌರವ ಸಲ್ಲಿಸಿದರು.

ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿ ಕಳೆದ ಎರಡು ವರ್ಷಗಳಲ್ಲಿ ರಾಜ್ಯದಾದ್ಯಂತ ಪ್ರವಾಸ ಕೈಗೊಂಡು ತಳಮಟ್ಟದಲ್ಲಿ ಪಕ್ಷ ಸಂಘಟನೆ ಬಲಪಡಿಸಿದ್ದಾರೆ. ಈಗಾಗಲೇ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ ಪಕ್ಷದ ಚಟುವಟಿಕೆಗಳಿಗೆ ಹೊಸ ಚೈತನ್ಯ ನೀಡಿದ್ದಾರೆ.

ಅವರ ನೇತೃತ್ವದಲ್ಲಿ ಮೈಸೂರು ಮುಡಾ ಹಗರಣದ ವಿರೋಧ ಪಾದಯಾತ್ರೆ, ವಾಲ್ಮೀಕಿ ನಿಗಮ ಹಗರಣದ ಹೋರಾಟ, ಬೆಲೆ ಏರಿಕೆ ಖಂಡಿಸಿ ನಡೆದ ಅಹೋರಾತ್ರಿ ಧರಣಿ, ರಾಜ್ಯವ್ಯಾಪಿ ಜನಾಕ್ರೋಶ ಯಾತ್ರೆ, ಕಬ್ಬು ಬೆಳೆಗಾರರ ಬೆಂಬಲ ಹೋರಾಟ, ಎಸ್ಸಿ-ಎಸ್ಟಿ ಅನುದಾನದ ದುರ್ಬಳಕೆ ವಿರುದ್ಧ ಹೋರಾಟ ಸೇರಿದಂತೆ ಹಲವು ಪ್ರಮುಖ ಚಳುವಳಿಗಳು ನಡೆದಿವೆ.

ಇದೇ ವೇಳೆ, ಕಾಂಗ್ರೆಸ್ ಸರ್ಕಾರದ ‘ಜನವಿರೋಧಿ’ ನೀತಿಗಳ ವಿರುದ್ಧ ಹೋರಾಟ ರೂಪಿಸುವಲ್ಲಿ ವಿಜಯೇಂದ್ರ ಅವರು ಮಹತ್ವದ ಪಾತ್ರ ವಹಿಸಿದ್ದಾರೆ. ವಿಜಯೇಂದ್ರ ಅವರ ನೇತೃತ್ವದಲ್ಲಿ ‘ಮನ್ ಕೀ ಬಾತ್’ ಕಾರ್ಯಕ್ರಮದ ಅನುಷ್ಠಾನದಲ್ಲಿ ಕರ್ನಾಟಕ ರಾಷ್ಟ್ರ ಮಟ್ಟದಲ್ಲಿ 3ನೇ ಸ್ಥಾನ ಗಳಿಸಿರುವುದು ಪಕ್ಷಕ್ಕೆ ಹೆಮ್ಮೆ ತಂದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.