ತುಮಕೂರಿಗೆ ಮೆಟ್ರೋ: ಡಿಪಿಆರ್ ತಯಾರಿಕೆಗಾಗಿ BMRCL ಟೆಂಡರ್ ಆಹ್ವಾನ

ಬೆಂಗಳೂರು: ತುಮಕೂರಿಗೆ ಮೆಟ್ರೋ ವಿಸ್ತರಣೆ ಯೋಜನೆಗೆ ಗತಿ ಸಿಕ್ಕಿದೆ. ಪ್ರಸ್ತಾವಿತ ಮಾರ್ಗದ ಸಮಗ್ರ ಯೋಜನಾ ವರದಿ ತಯಾರಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ಶನಿವಾರ ಟೆಂಡರ್ ಆಹ್ವಾನಿಸಿದೆ. ಈಗಾಗಲೇ ಸಿಲ್ಕ್ ಇನ್‌ಸ್ಟಿಟ್ಯೂಟ್–ಮಾದಾವರ ವರೆಗೆ ಹಸಿರು ಮಾರ್ಗ ಕಾರ್ಯನಿರ್ವಹಿಸುತ್ತಿದ್ದು, ಹೊಸದಾಗಿ 59.6 ಕಿ.ಮೀ ಉದ್ದದ ಮಾದಾವರ–ತುಮಕೂರು ಮಾರ್ಗವನ್ನು ವಿಸ್ತರಿಸುವ ಯೋಜನೆಯಿದೆ. ಒಂದೇ ವೇಳೆ, ಬೊಮ್ಮಸಂದ್ರ–ಹೊಸೂರು ಮೆಟ್ರೋ ವಿಸ್ತರಣಾ ಕೆಲಸ ಆಮೆ ವೇಗದಲ್ಲೇ ಸಾಗುತ್ತಿದೆ. ತುಮಕೂರು ಮಾರ್ಗ ಜಾರಿಯಾದರೆ ಇದು ರಾಜ್ಯದ ಮೊದಲ ಅಂತರ-ನಗರ ಮೆಟ್ರೋ ಯೋಜನೆಯಾಗಲಿದೆ.

ಸರ್ಕಾರ ಮೊದಲೇ ಮಾದಾವರ–ತುಮಕೂರು ಕಾರಿಡಾರ್ ಕಾರ್ಯಸಾಧ್ಯತಾ ಅಧ್ಯಯನಕ್ಕೆ ಸೂಚನೆ ನೀಡಿದ್ದು, ಮೇ ತಿಂಗಳಲ್ಲಿ ಸಲ್ಲಿಸಿದ ವರದಿಯನ್ನು PPP ಮಾದರಿಯಲ್ಲಿ ಜಾರಿಗೊಳಿಸಲು ಅನುಮೋದಿಸಲಾಗಿದೆ. ಒಟ್ಟು ವೆಚ್ಚ ₹20,649 ಕೋಟಿ ಎಂದು ಅಂದಾಜಿಸಲಾಗಿದೆ.
ಬಿಡ್‌ದಾರರು ₹4.5 ಲಕ್ಷ EMD ಜತೆಯಲ್ಲಿ ನ.20ರೊಳಗೆ ಅರ್ಜಿ ಸಲ್ಲಿಸಬೇಕು. ಆಯ್ಕೆಯಾದ ಬಳಿಕ ಡಿಪಿಆರ್ ತಯಾರಿಕೆಗೆ 4–5 ತಿಂಗಳು ಬೇಕಾಗುತ್ತದೆ.

ತುಮಕೂರು ಕೈಗಾರಿಕಾ ಕೇಂದ್ರವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಮೆಟ್ರೋ ವಿಸ್ತರಣೆಗಾಗಿ ರಾಜಕೀಯ ನಾಯಕರು ಹಾಗೂ ಉದ್ಯಮ ಸಮುದಾಯದಿಂದ ಬೇಡಿಕೆ ವ್ಯಕ್ತವಾಗಿತ್ತು. ಕಾರ್ಯಸಾಧ್ಯತಾ ವರದಿಯಂತೆ, ಒಂದೇ ದಿಕ್ಕಿನಲ್ಲಿ ಒಂದು ಗಂಟೆಗೆ 15,000 ಪ್ರಯಾಣಿಕರು ಸಂಚರಿಸಬಹುದು ಎಂದು BMRCL ಅಂದಾಜಿಸಿದೆ.

ಪ್ರಸ್ತಾವಿತ ಮಾರ್ಗವು BIEC (ಮಾದಾವರ)‌ನಿಂದ ಪ್ರಾರಂಭವಾಗಿ ಪೂರ್ಣ ಎಲೆವೆಟೆಡ್ ಆಗಿದ್ದು, 25 ನಿಲ್ದಾಣಗಳು ನಿರ್ಮಾಣವಾಗಲಿವೆ. ಮಾರ್ಗವು ನೆಲಮಂಗಲ, ದಾಬಸ್‌ಪೇಟೆ, ಕ್ಯಾತಸಂದ್ರ ಮುಂತಾದ ಪ್ರಮುಖ ಪ್ರದೇಶಗಳನ್ನು ಹಾದು ಹೋಗಲಿದೆ. ಪ್ರಸ್ತುತ ತುಮಕೂರು–ಬೆಂಗಳೂರು ರಸ್ತೆ ಪ್ರಯಾಣಕ್ಕೆ ಸರಾಸರಿ ಎರಡು ಗಂಟೆಗಳ ಕಾಲ ಬೇಕಾಗುತ್ತದೆ. ರೈಲುಗಳಿದ್ದರೂ ಅವುಗಳ ಆವರ್ತನೆ ಕಡಿಮೆ. ಆದರೆ ಮೆಟ್ರೋ 4–5 ನಿಮಿಷಗಳಿಗೊಮ್ಮೆ ಸಂಚರಿಸುವುದರಿಂದ ಪ್ರಯಾಣಿಕರಿಗೆ ದೊಡ್ಡ ನೆರವಾಗಲಿದೆ.

ಟೆಂಡರ್ ಪ್ರಕ್ರಿಯೆ ಮುಗಿದ ನಂತರ ತಾಂತ್ರಿಕ ಮತ್ತು ಆರ್ಥಿಕ ಅರ್ಹತೆಗಳ ಪರಿಶೀಲನೆ ನಡೆಯಲಿದ್ದು, ಸಂಪೂರ್ಣ ಪ್ರಕ್ರಿಯೆಗೆ ಕನಿಷ್ಠ 5–6 ತಿಂಗಳು ಬೇಕಾಗಬಹುದು ಎಂದು BMRCL ಅಧಿಕಾರಿಗಳು ತಿಳಿಸಿದ್ದಾರೆ. **ಮಾದಾವರ, ಮಾಕಳಿ, ದಾಸನಪುರ, ನೆಲಮಂಗಲ, ವೀವರ್ ಕಾಲೋನಿ, ನೆಲಮಂಗಲ ಟೋಲ್‌ಗೇಟ್, ಬೂದಿಹಾಳ್, ಟಿ. ಬೇಗೂರು, ತಿಪ್ಪಗೊಂಡನಹಳ್ಳಿ, ಕುಲವನಹಳ್ಳಿ, ಮಹಿಮಾಪುರ, ಬಿಲ್ಲನ್‌ಕೋಟೆ, ಸೋಂಪುರ ಕೈಗಾರಿಕಾ ಪ್ರದೇಶ, ದಾಬಸ್‌ಪೇಟೆ, ನಲ್ಲಾಯನಪಾಳ್ಯ, ಚಿಕ್ಕಹಳ್ಳಿ, ಹಿರೇಹಳ್ಳಿ ಕೈಗಾರಿಕಾ ಪ್ರದೇಶ, ಪಂಡಿತನಹಳ್ಳಿ, ಕ್ಯಾತ್ಸಂದ್ರ ಬೈಪಾಸ್‌, ಎಸ್‌ಐಟಿ, ತುಮಕೂರು ಬಸ್ ನಿಲ್ದಾಣ, ಟೂಡಾ ಲೇಔಟ್, ನಾಗಣ್ಣ ಪಾಳ್ಯ ಹಾಗೂ ಶಿರಾ ಗೇಟ್–**ಈ ಪ್ರದೇಶಗಳಲ್ಲಿ ಮೆಟ್ರೋ ನಿಲ್ದಾಣಗಳ ಸಾಧ್ಯತೆ ಇದೆ.