ಸೌದಿ ಅರೇಬಿಯಾದಲ್ಲಿ ಡೀಸೆಲ್ ಟ್ಯಾಂಕರ್‌ಗೆ ಬಸ್ ಢಿಕ್ಕಿ; ದಾರುಣವಾಗಿ ಸಾವನ್ನಪ್ಪಿದ 42 ಭಾರತೀಯರು

ಸೌದಿ ಅರೇಬಿಯಾ, ನವೆಂಬರ್ 17: ಸೌದಿ ಅರೇಬಿಯಾದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಡೀಸೆಲ್ ಟ್ಯಾಂಕರ್‌ಗೆ ಬಸ್ ಢಿಕ್ಕಿ ಹೊಡೆದ ಪರಿಣಾಮ 42 ಮಂದಿ ಭಾರತೀಯರು ಸಜೀವ ದಹನವಾಗಿರುವ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ. ಮೆಕ್ಕಾದಿಂದ ಮದೀನಕ್ಕೆ ತೆರಳುತ್ತಿದ್ದ ಈ ಬಸ್‌ ಮುಫರಿಹಾತ್ ಬಳಿ ದುರಂತಕ್ಕೀಡಾಗಿದೆ. ಮೃತರೆಲ್ಲರೂ ತೆಲಂಗಾಣ ಮೂಲದವರಾಗಿರುವ ಮಾಹಿತಿ ಲಭ್ಯವಾಗಿದೆ.

ಅಪಘಾತವು ಭಾರತೀಯ ಕಾಲಮಾನ ಪ್ರಕಾರ ಬೆಳಗಿನ ಜಾವ 1.30 ರ ವೇಳೆಗೆ ಸಂಭವಿಸಿದೆ. ಆ ಸಂದರ್ಭದಲ್ಲಿ ಬಹುತೇಕ ಪ್ರಯಾಣಿಕರು ನಿದ್ರಿಸುತ್ತಿದ್ದರು ಎನ್ನಲಾಗಿದೆ. ಢಿಕ್ಕಿಯ ನಂತರ ಬಸ್ ಬೆಂಕಿಗೆ ಆಹುತಿಯಾದ ಕಾರಣ, ಪ್ರಯಾಣಿಕರಿಗೆ ತಪ್ಪಿಸಿಕೊಳ್ಳಲು ಬಹಳ ಕಡಿಮೆ ಅವಕಾಶವಿತ್ತು. ಮೃತರಲ್ಲಿ ಕನಿಷ್ಠ 11 ಮಹಿಳೆಯರು ಮತ್ತು 10 ಮಕ್ಕಳು ಸೇರಿದ್ದಾರೆ.

ಮೃತರ ನಿಖರ ಸಂಖ್ಯೆಗಳ ಬಗ್ಗೆ ಇನ್ನೂ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ. ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ತೆಲಂಗಾಣ ಸರ್ಕಾರ ತಿಳಿಸಿದೆ. ಇದೇ ವೇಳೆ ಮುಖ್ಯಮಂತ್ರಿ ರೇವಂತ್ ರೆಡ್ಡಿ, ನವದೆಹಲಿಯ ಅಧಿಕಾರಿಗಳಿಗೆ ರಾಯಭಾರ ಕಚೇರಿ ಅಧಿಕಾರಿಗಳೊಂದಿಗೆ ನಿರಂತರವಾಗಿ ಸಂವಾದ ನಡೆಸುವಂತೆ ಸೂಚಿಸಿದ್ದಾರೆ.

ಬಸ್ ಬೆಂಕಿಗೆ ಆಹುತಿಯಾದಾಗ 42 ಉಮ್ರಾ ಯಾತ್ರಿಕರು ಬಸ್ಸಿನಲ್ಲಿದ್ದರು ಎಂದು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ತಿಳಿಸಿದ್ದಾರೆ. ರಿಯಾದ್‌ನ ಭಾರತೀಯ ರಾಯಭಾರ ಕಚೇರಿಯ ಉಪ ಮುಖ್ಯಸ್ಥ ಅಬು ಮಾಥೇನ್ ಜಾರ್ಜ್ ಅವರೊಂದಿಗೆ ಸಂಪರ್ಕದಲ್ಲಿದ್ದು, ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದೂ ಅವರು ತಿಳಿಸಿದ್ದಾರೆ. ಮೃತದೇಹಗಳನ್ನು ಭಾರತಕ್ಕೆ ತರಲು ಹಾಗೂ ಗಾಯಾಳುಗಳಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಒದಗಿಸಲು ಕೇಂದ್ರ ಸರ್ಕಾರ ಮುಂದಾಗಬೇಕೆಂದು ಓವೈಸಿ ವಿನಂತಿಸಿದ್ದಾರೆ.