ನಿತ್ಯ ರಗಳೆಯ ಬಸ್‌ ಸ್ಟ್ಯಾಂಡ್ , ಸಂಚಾರ ಬಂದ್!

ಹೊನ್ನಾವರ ನ. 11: ರಾಷ್ಟ್ರೀಯ ಹೆದ್ದಾರಿಯಿಂದ 2ಕಿ.ಮೀ. ಒಳಗೆ ನಗರ ಮಧ್ಯೆ 6ಕೋಟಿ ರೂ. ವೆಚ್ಚದಲ್ಲಿ ಹೊಸದಾಗಿ ಕಟ್ಟಿದ ಬಸ್‌ ಸ್ಟ್ಯಾಂಡ್ ನಿತ್ಯ ರಗಳೆಯ ಕೇಂದ್ರವಾಗಿದೆ. ಬಸ್ ಒಳಗೆ ಹೋಗಿ ಹೊರ ಬರಲು ಒಂದೇ ಮಾರ್ಗವಿದೆ. ರಸ್ತೆ ಒಂದು ಬಸ್ ಓಡಾಡುವಷ್ಟು ಕಿರಿದಾಗಿದೆ. ರಸ್ತೆಯ ಬದಿಗೆ ಅಂಗಡಿಗಳಿದ್ದು ಬೈಕ್, ಕಾರ್‌ಗಳು ನಿಲ್ಲುತ್ತವೆ. ಪ್ರಯಾಣಿಕರನ್ನು ಕರೆ ತಂದ ರಿಕ್ಷಾಕ್ಕೆ ನಿಲ್ಲಲು ಸ್ಥಳವಿಲ್ಲ. ಬೇಸಿಗೆಯಲ್ಲಿ ಬಸ್‌ ಸ್ಟ್ಯಾಂಡ್ ಒಳಗೆ ಬಿಸಿಲು, ಮಳೆಗಾಲದಲ್ಲಿ ನೀರು. ಬಸ್‌ ಸ್ಟ್ಯಾಂಡ್ ಗಿಂತ ಹೆದ್ದಾರಿಯಲ್ಲಿ ನಿಂತು ಬಸ್ ಹತ್ತುವುದು ಸುಖವೆಂದು ಪ್ರಯಾಣಿಕರು ಶರಾವತಿ ಸರ್ಕಲ್ ಮತ್ತು ಕಾಲೇಜು ಸರ್ಕಲ್‌ನಲ್ಲಿ ನಿಲ್ಲುತ್ತಾರೆ.

ತಿಂಗಳಿಗೆ 25 ಸಾವಿರ ರೂ. ಬಾಡಿಗೆ ತೆತ್ತು ಗ್ರಾಹಕರಿಲ್ಲದೇ ದಿವಾಳಿಯಾದ ಕ್ಯಾಂಟಿನ್ ಬಾಗಿಲು ಮುಚ್ಚಿ 3 ತಿಂಗಳಾಯಿತು. ರಾತ್ರಿ ಒಂದೂ ಬಸ್ ಬಸ್‌ ಸ್ಟ್ಯಾಂಡ್‌ಗೆ ಬರುವುದಿಲ್ಲ. ಇಲ್ಲಿ ರಾತ್ರಿ ಕಂಟ್ರೋಲರ್ ಇಲ್ಲ. ಪೊಲೀಸರು ಸ್ವಲ್ಪ ಹೊತ್ತು ಬಂದು ಮೊಬೈಲ್‌ನಲ್ಲಿ ಮಗ್ನರಾಗಿ ಮೀನು ಪೇಟೆಗೆ ಹೋಗುತ್ತಾರೆ. ನಿತ್ಯ ಹತ್ತಾರು ಬಾರಿ ರಸ್ತೆ ಸಂಚಾರ ಬಂದ್ ಆಗುತ್ತದೆ. ಶಾಸಕ ದಿನಕರ ಶೆಟ್ಟಿ ಬಸ್‌ ಸ್ಟ್ಯಾಂಡ್ ನಿರ್ಮಾಣದಲ್ಲಿ ತಪ್ಪಾಗಿದೆ ಎಂದು ಒಪ್ಪಿಕೊಳ್ಳುತ್ತಾರೆ. ಸರಿ ಪಡಿಸಲು ಅವರ ಪಕ್ಷ ಅಧಿಕಾರದಲ್ಲಿ ಇಲ್ಲ. ನಿತ್ಯ ಜನರ ರಗಳೆ, ಜಗಳ, ಗೋಳು, ಸಂಚಾರ ಸ್ಥಗಿತ. ಇದು ಹೊಸ ಬಸ್‌ ಸ್ಟ್ಯಾಂಡ್‌ನ ಹಗರಣ.