ಬೆಂಗಳೂರು: ನಟಿ ಪ್ರಿಯಾಂಕಾ ಉಪೇಂದ್ರ ಅವರ ಫೋನ್ ಹ್ಯಾಕ್ ಮಾಡಿದ ವಂಚಕನನ್ನು ಬೆಂಗಳೂರಿನ ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತನು ಬಿಹಾರ ಮೂಲದ ವಿಕಾಸ್ ಕುಮಾರ್ ಆಗಿದ್ದು, ಪ್ರಿಯಾಂಕಾ ಅವರ ಮೊಬೈಲ್ ಹ್ಯಾಕ್ ಮಾಡಿ ಅದರಲ್ಲಿದ್ದ ಸಂಪರ್ಕಗಳಿಗೆ ಮೆಸೇಜ್ ಕಳುಹಿಸಿ ಹಣ ಕೇಳಿದ್ದಾನೆ.

ನಟಿ ದೂರಿನ ಬಳಿಕ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಿಹಾರದಲ್ಲಿ ಬಂಧಿಸಿ, ಬೆಂಗಳೂರಿಗೆ ಕರೆತಂದಿದ್ದಾರೆ. ವಿಚಾರಣೆ ವೇಳೆ, ಪ್ರಿಯಾಂಕಾ ಅವರ ಮಗನಿಂದ ಪಡೆದುಕೊಂಡಿದ್ದ 50 ಸಾವಿರ ರೂ. ಹಣವನ್ನು ಖರ್ಚು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಸೆ.15ರಂದು ವಂಚಕ ಪ್ರಿಯಾಂಕಾ ಉಪೇಂದ್ರ ಅವರಿಗೆ ಕರೆ ಮಾಡಿ, “ನಿಮ್ಮ ಆರ್ಡರ್ ಡೆಲಿವರಿ ಮಾಡಲು ವಿಳಾಸ ಸಿಗುತ್ತಿಲ್ಲ, ಈ ಸಂಖ್ಯೆಗೆ ಕರೆ ಮಾಡಿ ಖಚಿತಪಡಿಸಿದರೆ ಡೆಲಿವರಿ ಮಾಡುತ್ತೇನೆ” ಎಂದು ಹೇಳಿದ್ದ. ಹೀಗೆ ಕಳುಹಿಸಿದ ನಂಬರ್‌ಗೆ ಪ್ರಿಯಾಂಕಾ ಕರೆ ಮಾಡಿದಾಗ ಅವರ ಫೋನ್ ಹ್ಯಾಕ್ ಆಗಿತ್ತು. ಮೊದಲಿಗೆ ಅದು ತಾಂತ್ರಿಕ ಸಮಸ್ಯೆ ಎಂದು ಭಾವಿಸಿದರೂ, ಬಳಿಕ ಉಪೇಂದ್ರ ಮತ್ತು ಅವರ ಪರಿಚಿತ ಮಹಾದೇವ್ ಅವರ ಮೊಬೈಲ್‌ಗಳೂ ಹ್ಯಾಕ್ ಆಗಿರುವುದು ಪತ್ತೆಯಾಯಿತು. ಹ್ಯಾಕರ್ ಕರೆ ಮಾಡಿದಾಗ, ಮನೆಗೆ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ವಸ್ತುಗಳ ಡೆಲಿವರಿ ಕರೆ ಎಂದು ಪ್ರಿಯಾಂಕಾ ಭಾವಿಸಿದ್ದರು.
