ಜಿಎಸ್‌ಟಿ ಇಳಿಕೆಯಿಂದ ವಾಹನ ಖರೀದಿಯಲ್ಲಿ ಏಕಾಏಕಿ ಹೆಚ್ಚಳ: ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಮತ್ತಷ್ಟು ಹೆಚ್ಚು

ಬೆಂಗಳೂರು, ನವೆಂಬರ್ 13: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆಗಸ್ಟ್ 15ರಂದು ಜಿಎಸ್‌ಟಿ ದರ ಇಳಿಕೆ ಮಾಡುವ ಕುರಿತು ಘೋಷಿಸಿದ್ದರು. ಬಳಿಕ ಸೆಪ್ಟೆಂಬರ್ 22ರಿಂದ ಹೊಸ ಜಿಎಸ್‌ಟಿ ದರ ಜಾರಿಯಾಯಿತು. 350 ಸಿಸಿ ವರೆಗಿನ ದ್ವಿಚಕ್ರ ವಾಹನಗಳ ಮೇಲಿನ ಜಿಎಸ್‌ಟಿ ಶೇ. 28ರಿಂದ 18ಕ್ಕೆ ಇಳಿಸಲಾಯಿತು. ಪೆಟ್ರೋಲ್ 1200 ಸಿಸಿ ಹಾಗೂ ಡೀಸೆಲ್ 1500 ಸಿಸಿ ವರೆಗೆ, 4 ಮೀಟರ್ ಉದ್ದದ ಕಾರುಗಳ ಮೇಲೂ ದರ ಇಳಿಕೆ ಜಾರಿಯಾಯಿತು.

ಈ ಬದಲಾವಣೆಯ ಪರಿಣಾಮವಾಗಿ ಹೊಸ ವಾಹನಗಳ ಖರೀದಿಯಲ್ಲಿ ಭಾರೀ ಏರಿಕೆ ಕಂಡುಬಂದಿದ್ದು, ಕರ್ನಾಟಕದಲ್ಲಿ ಅಕ್ಟೋಬರ್ ತಿಂಗಳಲ್ಲಿ ದಾಖಲೆಯ ಮಟ್ಟದ ವಾಹನ ಮಾರಾಟ ನಡೆದಿದೆ. ಜಿಎಸ್‌ಟಿ ಇಳಿಕೆಯ ಮೊದಲು ಆಗಸ್ಟ್‌ನಲ್ಲಿ 1,61,214 ಹೊಸ ವಾಹನಗಳು ನೋಂದಾಯವಾಗಿದ್ದರೆ, ಅಕ್ಟೋಬರ್‌ನಲ್ಲಿ ಈ ಸಂಖ್ಯೆ 2,52,420ಕ್ಕೆ ಏರಿಕೆಯಾಗಿದೆ — ಅಂದರೆ ಸುಮಾರು 91,206 ವಾಹನಗಳ ಹೆಚ್ಚಳ!

ಆಗಸ್ಟ್‌ನಲ್ಲಿ ದಿನಕ್ಕೆ ಸರಾಸರಿ 6,717 ವಾಹನಗಳು ರಸ್ತೆಗಿಳಿದಿದ್ದರೆ, ಈಗ ಅಕ್ಟೋಬರ್‌ನಲ್ಲಿ ದಿನಕ್ಕೆ 10,517 ವಾಹನಗಳು ನೋಂದಾಯವಾಗುತ್ತಿವೆ. ಇದರಲ್ಲಿ ಕಾರು, ಬೈಕು ಸೇರಿದಂತೆ ಎಲ್ಲಾ ರೀತಿಯ ವಾಹನಗಳೂ ಸೇರಿವೆ ಎಂದು ಅಪರ ಸಾರಿಗೆ ಆಯುಕ್ತ ಸಿ. ಮಲ್ಲಿಕಾರ್ಜುನ ತಿಳಿಸಿದ್ದಾರೆ.

ಬೆಂಗಳೂರು ನಗರದಲ್ಲೂ ಇದೇ ರೀತಿಯ ಏರಿಕೆ ದಾಖಲಾಗಿದೆ. ಆಗಸ್ಟ್‌ನಲ್ಲಿ 68,446 ಹೊಸ ವಾಹನಗಳು ನೋಂದಾಯವಾಗಿದ್ದರೆ, ಅಕ್ಟೋಬರ್‌ನಲ್ಲಿ ಅದು 89,014ಕ್ಕೆ ಏರಿಕೆಯಾಗಿದೆ. ದಿನಕ್ಕೆ 2,685 ವಾಹನಗಳಿಂದ ಅದು 3,748ಕ್ಕೆ ಏರಿಕೆಯಾಗಿದೆ — ಅಂದರೆ ದಿನಕ್ಕೆ 1,063 ಹೆಚ್ಚುವರಿ ವಾಹನಗಳು ರಸ್ತೆಗಿಳಿಯುತ್ತಿವೆ.

ವಾಹನ ಸವಾರರ ಪ್ರಕಾರ, ಜಿಎಸ್‌ಟಿ ಇಳಿಕೆಯ ನಂತರ ಮಧ್ಯಮ ವರ್ಗದವರು ಹೆಚ್ಚು ಸಂಖ್ಯೆಯಲ್ಲಿ ಹೊಸ ವಾಹನ ಖರೀದಿ ಮಾಡಲು ಮುಂದಾಗಿದ್ದಾರೆ. ಇದರ ಪರಿಣಾಮವಾಗಿ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ. ಒಟ್ಟಿನಲ್ಲಿ, ನೂತನ ಜಿಎಸ್‌ಟಿ ದರ ಜಾರಿಯಾದ ಬಳಿಕ ಸಿಲಿಕಾನ್ ಸಿಟಿಯ ಜನರು ವಾಹನ ಖರೀದಿಯಲ್ಲಿ ಉತ್ಸಾಹ ತೋರಿದ್ದು, ಟ್ರಾಫಿಕ್ ಹೆಚ್ಚಳ ಅನಿವಾರ್ಯವಾಗಿದೆ.