ಬೆಂಗಳೂರು (ನ.12): ದೆಹಲಿ ಕೆಂಪುಕೋಟೆ ಬಳಿ ನಡೆದ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ರಾಜ್ಯ ಸಚಿವರು ಮತ್ತು ಶಾಸಕರು, ದಾಳಿ ತಡೆಯಲು ವಿಫಲರಾದ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಜವಾಬ್ದಾರಿ ಹೊತ್ತುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು, “ಅಮಿತ್ ಶಾ ಅವರು ದೇಶದ ಗೃಹ ಸಚಿವರಾಗಿದ್ದು, ಚುನಾವಣಾ ವೇದಿಕೆಯಲ್ಲಿ ಬಾಂಗ್ಲಾದೇಶದವರು ಭಾರತಕ್ಕೆ ಬರುತ್ತಿದ್ದಾರೆ ಎಂದು ಹೇಳುತ್ತಾರೆ. ಇಂತಹ ಅಸಮರ್ಥ ಗೃಹ ಸಚಿವರಿಲ್ಲ. ಉಗ್ರ ದಾಳಿ ನಡೆದಾಗ ವಿರೋಧ ಪಕ್ಷದವರ ಮೇಲೆ ಆರೋಪ ಮಾಡುತ್ತಾರೆ. ಗೃಹ ಸಚಿವರಾಗಿ ಅವರಿಗೆ ಹೊಣೆಗಾರಿಕೆ ಇಲ್ಲವೇ? ಇವರ ಅಸಮರ್ಥತೆಯಿಂದ ಇನ್ನಷ್ಟು ಜನರು ಪ್ರಾಣ ಕಳೆದುಕೊಳ್ಳಬೇಕೇ?” ಎಂದು ಪ್ರಶ್ನಿಸಿದರು.

ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ, “ಉಗ್ರ ದಾಳಿಯಂಥ ಸಂದರ್ಭದಲ್ಲಿ ನಾವು ಒಗ್ಗಟ್ಟಿನಿಂದ ನಿಲ್ಲಬೇಕು. ಆದರೆ ಪುಲ್ವಾಮಾ, ಪಹಲ್ಗಾಂ ನಂತರ ದೆಹಲಿಯಲ್ಲೂ ದಾಳಿ ನಡೆದಿದೆ. ಯಾರಿಂದಲಾದರೂ ನ್ಯೂನತೆ ಉಂಟಾದರೆ ಅದನ್ನು ಒಪ್ಪಿಕೊಳ್ಳಬೇಕು. ನೇರವಾಗಿ ಪ್ರಧಾನಿ ಮೋದಿ ಅವರು ಘಟನೆಯ ಜವಾಬ್ದಾರಿ ಹೊತ್ತುಕೊಳ್ಳಬೇಕು. ಇದು ಕೇಂದ್ರದ ಭದ್ರತಾ ವೈಫಲ್ಯ,” ಎಂದು ಹೇಳಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು, “ಅಮಿತ್ ಶಾ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುತ್ತಿದ್ದೇನೆಂದು ಪದೇ ಪದೇ ಹೇಳುತ್ತಾರೆ. ಆದರೂ ಉಗ್ರ ದಾಳಿಗಳು ತಡೆಯಲಾಗುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಜನತೆಗೆ ಉತ್ತರ ಕೊಡಬೇಕು,” ಎಂದು ಆಗ್ರಹಿಸಿದರು.
ವಸತಿ ಸಚಿವ ಜಮೀರ್ ಅಹಮದ್ ಅವರು, “ರಾಷ್ಟ್ರ ರಾಜಧಾನಿಯಲ್ಲಿ ಉಗ್ರರ ದಾಳಿ ನಡೆದಿರುವುದು ಖಂಡನೀಯ. ಕೇಂದ್ರ ಸರ್ಕಾರ ಇದರ ಸಂಪೂರ್ಣ ಜವಾಬ್ದಾರಿ ಹೊತ್ತುಕೊಳ್ಳಬೇಕು. ಇಂತಹ ದುಷ್ಕೃತ್ಯಗಳು ಮರುಕಳಿಸಬಾರದು. ಇದು ಕೇಂದ್ರ ಗುಪ್ತಚರ ಇಲಾಖೆಯ ಸ್ಪಷ್ಟ ವೈಫಲ್ಯ,” ಎಂದು ಹೇಳಿದರು.
