ಕ್ಯಾರೆಕ್ಟರ್ ಬಗ್ಗೆ ಗಂಭೀರ ಆರೋಪ ಮಾಡಿದ ಅಶ್ವಿನಿ ಗೌಡಗೆ ರಕ್ಷಿತಾ ಶೆಟ್ಟಿ ನೀಡಿದ ಓಪನ್ ಚಾಲೆಂಜ್

ಬಿಗ್‌ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿ ಮತ್ತು ಅಶ್ವಿನಿ ಗೌಡ ನಡುವೆ ತೀವ್ರ ವಾಗ್ವಾದ ನಡೆದಿದೆ. ರಕ್ಷಿತಾ ಶೆಟ್ಟಿಯ ವರ್ತನೆ ಹಾಗೂ ವ್ಯಕ್ತಿತ್ವದ ಬಗ್ಗೆ ಅಶ್ವಿನಿ ಗಂಭೀರ ಆರೋಪ ಮಾಡಿದ್ದಾರೆ. “ನೀನು ಅಷ್ಟು ಮುಗ್ಧೆ ಅಲ್ಲ. ಡ್ರಾಮಾ ಅಂತ ಹೇಳ್ತಾರೆ, ರಕ್ಷಿತಾ ಎಲ್ಲರ ಕೈ ಹಿಡಿದು ಮಾತನಾಡುತ್ತಾರೆ, 24-25ನೇ ವಯಸ್ಸಿನಲ್ಲಿ ನಾವೆಲ್ಲಾ ಹೀಗೆ ಮಾಡಿರಲಿಲ್ಲ. ಹೊರಗಿನವರು ನೋಡುತ್ತಿದ್ದಾರೆ ಎಂಬುದು ಮರೆಯಬೇಡಿ” ಎಂದು ಆರೋಪಿಸಿದರು.

“ನಾನು ನೂರು ಸಿನಿಮಾಗಳನ್ನು ಮಾಡಿದವಳು, ಯೂಟ್ಯೂಬ್ ಚಾನೆಲ್ ಮಾಡಿ ಬಂದವಳಲ್ಲ. ಮೂರನೇ ವಾರ ಒಂದೇ ಟಾಸ್ಕ್‌ನಲ್ಲಿ ನನ್ನ ವ್ಯಕ್ತಿತ್ವವನ್ನು ಪ್ರಶ್ನಿಸುವ ಹಕ್ಕು ನಿನಗಿಲ್ಲ. ನಿನ್ನಂಥ ಚಾನೆಲ್‌ಗಳನ್ನು ನಾನು ನೂರು ಮಾಡಬಹುದು. 39-40 ವಯಸ್ಸಿನಲ್ಲಿ ನೂರು ಸಿನಿಮಾ ಮಾಡು, ತೋರಿಸು” ಎಂದು ರಕ್ಷಿತಾಗೆ ಚಾಲೆಂಜ್ ಹಾಕಿದರು.

ಮನೆಯ ಟಾಸ್ಕ್‌ನಲ್ಲಿ ಇಬ್ಬರು ಸ್ಪರ್ಧಿಗಳಿಗೆ ಕಪ್ಪು ಮಸಿ ಬಳಿಯುವ ಕೆಲಸ ನೀಡಲಾಗಿತ್ತು. ರಕ್ಷಿತಾ, ಅಶ್ವಿನಿ ಮತ್ತು ಕಾಕ್ರೋಚ್ ಸುಧಿ ಅವರ ಮುಖಕ್ಕೆ ಮಸಿ ಬಳಿದರು. ಅದಕ್ಕೆ ಪ್ರತಿಯಾಗಿ ಅಶ್ವಿನಿ ಕೂಡಾ ರಕ್ಷಿತಾಳ ಮುಖಕ್ಕೆ ಮಸಿ ಬಳಿದರು. ಇದಕ್ಕೆ ಪ್ರತಿಯಾಗಿ ರಕ್ಷಿತಾ “ನೀವು ಹೊರಗೆ ಯಶಸ್ವಿಯಾದವರಾಗಿರಬಹುದು, ಆದರೆ ಇಲ್ಲಿ ಇತರರನ್ನು ಕಾಲಡಿಯಲ್ಲಿ ತುಳಿಯುತ್ತೀರಿ, ಮ್ಯಾನಿಪ್ಯೂಲೇಟ್ ಮಾಡ್ತೀರಿ. ನಿಮ್ಮ ವ್ಯಕ್ತಿತ್ವ ನನಗಿಷ್ಟವಿಲ್ಲ” ಎಂದು ರಕ್ಷಿತಾ ಹೇಳಿದರು. “ನಾನು ಇನೋಸೆಂಟ್‌ಗಳಿಗೆ ಇನೋಸೆಂಟ್‌, ರಾಕ್ಷಸಿಯರಿಗೆ ರಾಕ್ಷಸಿ. ನಿನ್ನನ್ನು ಮೊದಲು ಹೊರಗೆ ಕಳುಹಿಸಿ ನಂತರ ನಾನು ಬಿಗ್‌ಬಾಸ್‌ನಿಂದ ಹೊರಹೋಗುತ್ತೇನೆ” ಎಂದು ಓಪನ್ ಚಾಲೆಂಜ್ ಮಾಡಿದರು.