ಸಬರಮತಿ ಎಕ್ಸ್‌ಪ್ರೆಸ್‌ನಲ್ಲಿ ಬೆಡ್‌ಶೀಟ್‌ಗಾಗಿ ಜಗಳ – ಸೈನಿಕನನ್ನು ಇರಿದು ಕೊಂದ ವ್ಯಕ್ತಿ

ಬಿಕಾನೇರ್, ನವೆಂಬರ್ 4: ಸಬರಮತಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಡ್‌ಶೀಟ್‌ ವಿಚಾರವಾಗಿ ಜಗಳ ತೀವ್ರಗೊಂಡು ಸೈನಿಕನೊಬ್ಬನ ಕೊಲೆಯಾಗಿ ಅಂತ್ಯಗೊಂಡ ದಾರುಣ ಘಟನೆ ನಡೆದಿದೆ. ಜಮ್ಮು ಮತ್ತು ಕಾಶ್ಮೀರದ ಉಧಂಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಜಿಗ್ನೇಶ್ ಚೌಧರಿ ಎಂಬ ಸೈನಿಕನನ್ನು ಆರೋಪಿಯೊಬ್ಬ ಇರಿದು ಕೊಂದಿದ್ದಾನೆ.

ಮಾಹಿತಿಯ ಪ್ರಕಾರ, ಸೈನಿಕನು ಸಹ ಪ್ರಯಾಣಿಕನ ಬಳಿ ಬೆಡ್‌ಶೀಟ್‌ ಕೇಳಿದ ಸಂದರ್ಭದಲ್ಲಿ ವಾಗ್ವಾದ ಉಲ್ಬಣಗೊಂಡಿತ್ತು. ಆರೋಪಿಯನ್ನು ಜುಬೈರ್ ಮೆಮನ್ ಎಂದು ಗುರುತಿಸಲಾಗಿದ್ದು, ರಾಜಸ್ಥಾನದ ಬಿಕಾನೇರ್ ರೈಲ್ವೆ ಪೊಲೀಸರು ಅವರನ್ನು ಬಂಧಿಸಿದ್ದಾರೆ.

ಮೃತ ಜವಾನ್ ಫಿರೋಜ್‌ಪುರ ಕಂಟೋನ್ಮೆಂಟ್‌ನಿಂದ ರೈಲು ಹತ್ತಿ ಗುಜರಾತ್‌ನ ಸಬರಮತಿ ಕಡೆಗೆ ಪ್ರಯಾಣಿಸುತ್ತಿದ್ದರು. ಎಸಿ ಕೋಚ್‌ನಲ್ಲಿ ನಡೆದ ವಾಗ್ವಾದದ ವೇಳೆ, ಜುಬೈರ್ ಚಾಕುವಿನಿಂದ ಜಿಗ್ನೇಶ್‌ನ ಪಾದದ ಭಾಗಕ್ಕೆ ಇರಿದು ಪರಾರಿಯಾದ. ತೀವ್ರ ರಕ್ತಸ್ರಾವದಿಂದ ಸೈನಿಕ ಸ್ಥಳದಲ್ಲೇ ಸಾವನ್ನಪ್ಪಿದರು. ಈ ಘಟನೆ ಭಾನುವಾರ ರಾತ್ರಿ ನಡೆದಿರುವುದು ತಿಳಿದುಬಂದಿದೆ. ಈ ಘಟನೆ ಹಿನ್ನೆಲೆಯಲ್ಲಿ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.