ಮುಂಬೈ: ಚೊಚ್ಚಲ ಮಹಿಳಾ ವಿಶ್ವಕಪ್ ಕ್ರಿಕೆಟ್ ಚಾಂಪಿಯನ್ ಆಗಿ ಭಾರತ ಇತಿಹಾಸ ನಿರ್ಮಿಸಿದೆ. ಫೈನಲ್‌ನಲ್ಲಿ ಆಫ್ರಿಕಾ ವಿರುದ್ಧ 52 ರನ್‌ಗಳ ಭರ್ಜರಿ ಜಯ ಸಾಧಿಸಿ, ಮೊದಲ ಬಾರಿಗೆ ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕಿದೆ. ಮೊದಲು ಬ್ಯಾಟ್ ಮಾಡಿದ ಭಾರತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 298 ರನ್‌ಗಳ ಬೃಹತ್ ಮೊತ್ತ ಕಟ್ಟಿತು. ಕಠಿಣ ಗುರಿ ಬೆನ್ನಟ್ಟಿದ ಆಫ್ರಿಕಾ ತಂಡ 45.3 ಓವರ್‌ಗಳಲ್ಲಿ 246 ರನ್‌ಗಳಿಗೆ ಆಲೌಟ್ ಆಯಿತು. ಆರಂಭಿಕ ಆಟಗಾರ್ತಿ ತಜ್ಮಿನ್ ಬ್ರಿಟ್ಸ್ 23 ರನ್‌ಗಳಿಸಿ ರನ್‌ಔಟ್ ಆಗಿದರೆ, ಅನ್ನೆಕೆ ಬಾಷ್ ಶೂನ್ಯಕ್ಕೆ ಔಟಾದರು. ಈ ವೇಳೆಗೆ ಪಂದ್ಯ ಭಾರತದ ಕಡೆ ತಿರುಗಿತು.

ಎರಡನೇ ವಿಕೆಟ್‌ಗೆ ಲಾರಾ ವೊಲ್ವಾರ್ಡ್ ಮತ್ತು ಸುನೆ ಲೂಸ್ 51 ಎಸೆತಗಳಲ್ಲಿ 52 ರನ್‌ಗಳ ಜೋಡಿ ಆಡಿದರು. ಇವರಿಬ್ಬರು ಸ್ಥಿರವಾಗಿ ಆಡುತ್ತಿದ್ದಂತೆಯೇ ನಾಯಕಿ ಹರ್ಮನ್‌ಪ್ರೀತ್ ಕೌರ್ ಶಫಾಲಿ ವರ್ಮಾಗೆ ಬೌಲಿಂಗ್ ನೀಡಿದರು. ಈ ಪ್ರಯೋಗ ಫಲ ನೀಡಿದಂತೆ, ಸುನೆ ಲೂಸ್ (25) ಶಫಾಲಿಯ ಬೌಲಿಂಗ್‌ನಲ್ಲಿ ಕ್ಯಾಚ್ ನೀಡಿ ಔಟಾದರು. ನಂತರ ಮರಿಝನ್ನೆ ಕಪ್ ಕೇವಲ 4 ರನ್‌ಗಳಿಸಿ ಶಫಾಲಿಯ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು.
ಒಂದು ಕಡೆ ವಿಕೆಟ್‌ಗಳು ಉರುಳುತ್ತಿದ್ದರೂ ನಾಯಕಿ ಲಾರಾ ವೊಲ್ವಾರ್ಡ್ ಶತಕ ಸಿಡಿಸಿ ಹೋರಾಟ ಮುಂದುವರಿಸಿದರು. ಆದರೆ ದೀಪ್ತಿ ಶರ್ಮಾ ಬೌಲಿಂಗ್‌ನಲ್ಲಿ ಅಮನ್‌ಜೋತ್ ಕೌರ್ ಹಿಡಿದ ಕ್ಯಾಚ್‌ಗೆ ಬಲಿಯಾಗಿ 101 (98 ಎಸೆತ, 11 ಬೌಂಡರಿ, 1 ಸಿಕ್ಸ್) ರನ್‌ಗಳಿಸಿ ಔಟಾದರು. ವೊಲ್ವಾರ್ಡ್ ಔಟಾದ ಬಳಿಕ ದೀಪ್ತಿ ಶರ್ಮಾ ಅದ್ಭುತ ಬೌಲಿಂಗ್ ಪ್ರದರ್ಶಿಸಿ ಒಟ್ಟು 5 ವಿಕೆಟ್ ಪಡೆದರು. ಅವರ ಸ್ಪೆಲ್‌ನಿಂದ ಭಾರತಕ್ಕೆ ಇತಿಹಾಸಾತ್ಮಕ ವಿಶ್ವಕಪ್ ಜಯ ದೊರಕಿತು.



