ಬೆಳಗಾವಿ | ರಾಜ್ಯೋತ್ಸವದ ದಿನ ಎಂಇಎಸ್‌ ಕರಾಳ ದಿನಾಚರಣೆ – 150 ಮಂದಿಯ ವಿರುದ್ಧ FIR ದಾಖಲು

ಬೆಳಗಾವಿ: ಕನ್ನಡ ರಾಜ್ಯೋತ್ಸವ ದಿನವೇ ಬೆಳಗಾವಿಯಲ್ಲಿ ನಾಡದ್ರೋಹಿ ಎಂಇಎಸ್‌ ಕರಾಳ ದಿನಾಚರಣೆ ನಡೆಸಿದ ಹಿನ್ನೆಲೆಯಲ್ಲಿ ಬೆಳಗಾವಿ ಮಾರ್ಕೆಟ್‌ ಪೊಲೀಸರು 150 ಮಂದಿಯ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಮಹಾರಾಷ್ಟ್ರಕ್ಕೆ ಜೈಕಾರ ಹಾಕಿದ ಮತ್ತು ಭಾಷಾ ದ್ವೇಷ ಉಸಿರಾಡಿಸುವ ಕೃತ್ಯಗಳಲ್ಲಿ ತೊಡಗಿದ್ದ ಆರೋಪದ ಮೇರೆಗೆ ಪಿಎಸ್‌ಐ ಹಾವಣ್ಣ ಅವರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಎಂಇಎಸ್‌ ಮಾಜಿ ಶಾಸಕ ಮನೋಹರ ಕಿನೇಕರ್, ಶುಭಂ ಶೇಳಕೆ ಸೇರಿದಂತೆ ಒಟ್ಟು 150 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾದ ನಂತರ ಆರೋಪಿಗಳು ಬೆಳಗಾವಿಯಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಆರೋಪಿಗಳನ್ನು ಬಂಧಿಸಲು ಬೆಳಗಾವಿ ಮಾರ್ಕೆಟ್‌ ಪೊಲೀಸರು ಬಲೆ ಬೀಸಿದ್ದಾರೆ.

ಬೆಳಗಾವಿಯಲ್ಲಿ ರಾಜಕೀಯ ಅಸ್ತಿತ್ವ ಕಳೆದುಕೊಂಡಿರುವ ಎಂಇಎಸ್‌ ಈಗ ಮರಾಠಿಗರ ಭಾವನೆಗಳನ್ನು ಕೆರಳಿಸಿ ಕನ್ನಡಿಗರ ವಿರುದ್ಧ ವಿಭಜನೆ ಸೃಷ್ಟಿಸುವ ಪ್ರಯತ್ನ ಮಾಡುತ್ತಿದೆ. ಇದೇ ಉದ್ದೇಶದಿಂದ ರಾಜ್ಯೋತ್ಸವದ ದಿನ ಬೆಳಗಾವಿ ಸರ್ದಾರ ಮೈದಾನದಲ್ಲಿ ಕರಾಳ ದಿನಾಚರಣೆ ನಡೆಸಿ, ಅಲ್ಲಿಂದ ಮೆರವಣಿಗೆ ರೂಪದಲ್ಲಿ ಕಡಗೆ ಮರಾಠ ಮಂಡಳಿಗೆ ತೆರಳಿ ಸಮಾವೇಶ ಹಮ್ಮಿಕೊಂಡಿತ್ತು.