ಹೆಜ್ಜೇನು ದಾಳಿ – ಗಾಯಗೊಂಡ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು

ಮಡಿಕೇರಿ: ಕೊಡಗು ಜಿಲ್ಲೆಯ ವಿರಾಜಪೇಟೆ ನಗರದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹೆಜ್ಜೇನು ದಾಳಿ ನಡೆದಿದ್ದು, 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಎಂದಿನಂತೆ ವಿದ್ಯಾರ್ಥಿಗಳು ಶಾಲೆಗೆ ಬಂದು ಬೆಳಗ್ಗಿನ ಪ್ರಾರ್ಥನೆ ಮುಗಿಸಿ ಬಿಸಿಹಾಲು ಪಡೆಯಲು ಸಾಲಿನಲ್ಲಿ ನಿಂತಿದ್ದ ವೇಳೆ, ಸಮೀಪದ ತೋಟದಿಂದ ಹಾರಿಬಂದ ಹೆಜ್ಜೇನುಗಳ ಹಿಂಡು ಆಕಸ್ಮಿಕವಾಗಿ ದಾಳಿ ನಡೆಸಿತು. ಮಕ್ಕಳು ಹಾಗೂ ಶಾಲಾ ಶಿಕ್ಷಕರ ಮೇಲೆ ದಾಳಿ ನಡೆದಿದ್ದು, ಘಟನೆಯಿಂದ ಶಾಲಾ ಆವರಣದಲ್ಲಿ ಗೊಂದಲ ಸೃಷ್ಟಿಯಾಯಿತು.

ಮಕ್ಕಳ ಚೀರಾಟ ಕೇಳುತ್ತಿದ್ದಂತೆಯೇ ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿ ಜೇನು ಹಿಂಡುಗಳನ್ನು ಓಡಿಸಿ ಗಾಯಗೊಂಡ ವಿದ್ಯಾರ್ಥಿಗಳನ್ನು ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಶಾಲೆಯ ಮುಖ್ಯಶಿಕ್ಷಕಿ ಅನ್ನಮ್ಮ ಅವರೂ ದಾಳಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯರ ಪ್ರಕಾರ, ಎಲ್ಲ ಮಕ್ಕಳ ಸ್ಥಿತಿ ಸ್ಥಿರವಾಗಿದ್ದು ಯಾವುದೇ ಗಂಭೀರ ಅಪಾಯ ಇಲ್ಲ. ಘಟನೆ ಬಳಿಕ ವಿರಾಜಪೇಟೆ ಪೊಲೀಸ್‌ ಅಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದ್ದಾರೆ.