ಕಾರವಾರ : ಅಬ್ಬರದ ಗಾಳಿ–ಮಳೆಯಿಂದ ಅರಬ್ಬಿ ಸಮುದ್ರದಲ್ಲಿ ಕಾಣೆಯಾಗಿದ್ದ ಗೋವಾ ಮೂಲದ ಮೀನುಗಾರಿಕಾ ಬೋಟ್‌ನ್ನು ಭಾರತೀಯ ತಟ ರಕ್ಷಣಾ ಪಡೆ ಪತ್ತೆಹಚ್ಚಿ, 31 ಮೀನುಗಾರರ ಜೀವವನ್ನು ಉಳಿಸಿದ ಘಟನೆ ನಡೆದಿದೆ. ಗೋವಾವಿನಿಂದ ಮೀನುಗಾರಿಕೆಗೆ ತೆರಳಿದ್ದ ಐ.ಎಫ್.ಬಿ ಸಂತ ಆಂಟನಿ ಎಂಬ ಬೋಟ್ ಅಕ್ಟೋಬರ್ 24 ರಂದು ಗಾಳಿ–ಮಳೆಯಿಂದ ಸಂಪರ್ಕ ತಪ್ಪಿಸಿಕೊಂಡು ಕಾಣೆಯಾಗಿತ್ತು. ಆಳ ಸಮುದ್ರದಲ್ಲಿ ಸ್ಟೇರಿಂಗ್ ಮತ್ತು ಗೇರ್ ವೈಫಲ್ಯದಿಂದ ಬೋಟ್ ನಿಯಂತ್ರಣ ತಪ್ಪಿ ಅಪಾಯಕ್ಕೆ ಸಿಲುಕಿತ್ತು. ತುರ್ತು ಮಾಹಿತಿ ದೊರೆತ ತಕ್ಷಣ, ಡೋನಿಯರ್ ಗಸ್ತು ವಿಮಾನದ ಸಹಾಯದಿಂದ ಬೋಟ್‌ನ ಸ್ಥಳ ಪತ್ತೆ ಹಚ್ಚಲಾಯಿತು. ಬಳಿಕ, ಕೋಸ್ಟ್ ಗಾರ್ಡ್‌ನ ಐ.ಸಿ.ಜಿ.ಎಸ್ ಕಸ್ತೂರಬಾ ಗಾಂಧಿ ಹಡಗು 100 ನಾಟಿಕಲ್ ಮೈಲುಗಳ ದೂರದಲ್ಲಿದ್ದ ಬೋಟ್‌ನತ್ತ ಪ್ರತಿಕೂಲ ಹವಾಮಾನದಲ್ಲಿಯೇ ತೆರಳಿ ರಕ್ಷಣಾ ಕಾರ್ಯ ನಡೆಸಿತು. ಬೋಟ್‌ನಲ್ಲಿದ್ದ 31 ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಿ, ಹಾನಿಗೊಂಡಿದ್ದ ಬೋಟ್‌ನ್ನು ಹೊನ್ನಾವರ ಮೀನುಗಾರಿಕಾ ಬಂದರಿಗೆ ಎಳೆತರಲಾಗಿದೆ. ರಕ್ಷಿಸಲ್ಪಟ್ಟ ಮೀನುಗಾರರನ್ನು ಬಳಿಕ ಗೋವಾಕ್ಕೆ ಕರೆದೊಯ್ಯಲಾಗಿದೆ.




