ಮೊಂತಾ ಚಂಡಮಾರುತದಿಂದ ಅ.29ರವರೆಗೆ ಭಾರೀ ಮಳೆಯ ಎಚ್ಚರಿಕೆ

ಬಂಗಾಳಕೊಲ್ಲಿಯಲ್ಲಿ ಉಂಟಾದ ಮೊಂತಾ ಚಂಡಮಾರುತ ಆಂಧ್ರಪ್ರದೇಶ ಹಾಗೂ ಒಡಿಶಾ ಕರಾವಳಿ ಭಾಗಗಳತ್ತ ಧಾವಿಸುತ್ತಿದೆ. ಭಾರತದ ಪೂರ್ವ ಕರಾವಳಿಯತ್ತ ಲಗ್ಗೆ ಇಡಲು ಚಂಡಮಾರುತ ಸಜ್ಜಾಗಿದೆ. ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ನಾಳೆ ಕಾಕಿನಾಡದ ಬಳಿ, ಮಚಲಿಪಟ್ಟಣಂ ಮತ್ತು ಕಳಿಂಗಪಟ್ಟಣಂ ನಡುವಿನ ಪ್ರದೇಶದಲ್ಲಿ ಭೂಮಿಗೆ ಅಪ್ಪಳಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ, ಬೆಂಗಳೂರು ಸೇರಿದಂತೆ ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಆಂಧ್ರ, ಒಡಿಶಾ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ವಿಶೇಷವಾಗಿ ಕಾಕಿನಾಡ, ಮಚಲಿಪಟ್ಟಣಂ ಮತ್ತು ಕಳಿಂಗಪಟ್ಟಣಂ ಕರಾವಳಿ ಭಾಗಗಳಲ್ಲಿ ಚಂಡಮಾರುತದ ಪರಿಣಾಮ ಭಾರಿಯಾಗಬಹುದು ಎಂದು ಸೂಚಿಸಲಾಗಿದೆ. ಇದೇ ರೀತಿ, ಆಂಧ್ರ–ತೆಲಂಗಾಣ ಗಡಿ ಭಾಗಕ್ಕೆ ಹತ್ತಿರವಿರುವ ಕರ್ನಾಟಕದ ಬಳ್ಳಾರಿ, ವಿಜಯನಗರ, ರಾಯಚೂರು, ಕೊಪ್ಪಳ, ಕಲಬುರಗಿ ಮತ್ತು ಬೀದರ್ ಜಿಲ್ಲೆಗಳಲ್ಲಿ ಸಹ ವ್ಯಾಪಕವಾಗಿ ಮಳೆಯಾಗುವ ಸಾಧ್ಯತೆ ಇದೆ.