ಮದುವೆಗೆ ವೀಳ್ಯ ಕೊಡದಿದ್ದಕ್ಕೆ ಊರಗೌಡನಿಂದ ಕುಟುಂಬದ ಬಹಿಷ್ಕಾರ.! 10 ವರ್ಷಗಳಿಂದ ಶಾಪದಲ್ಲಿ ಬದುಕುತ್ತಿದೆ ಆ ಕುಟುಂಬ.!

ಅಂಕೋಲಾ: ದೇಶ ಸ್ವತಂತ್ರಗೊಂಡು 75 ವರ್ಷದ ಅಮೃತ ಘಳಿಗೆಯಲ್ಲಿದ್ದರೂ ಇನ್ನು ಕೂಡಾ ಬಹಿಷ್ಕಾರದ ಸಾಮಾಜಿಕ ಪಿಡುಗು ಸಮಾಜವನ್ನ ಬಾಧಿಸುತ್ತಲೆ ಇದೆ. ಇಂತಹ ಅನಿಷ್ಠ ಪದ್ಧತಿಗಳ ವಿರುದ್ಧ ಎಂತಹ ಸಮರ ಸಾರಿದರೂ ಅದು ನಿರ್ಮೂಲನೆ ಆಗಿಲ್ಲ. ಇಂತಹ ಸಾಮಾಜಿಕ ಬಹಿಷ್ಕಾರದ ಪ್ರಕರಣ ಅಂಕೋಲ ತಾಲೂಕಿನ ಹಾರವಾಡ ಗ್ರಾಮದಲ್ಲಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಗೌಡ ಸಮುದಾಯದಿಂದ ಗೌಡ ಕುಟುಂಬವನ್ನೇ ಬಹಿಷ್ಕಾರ ಮಾಡಿ ಅಮಾನವೀಯತೆ ಮೆರೆಯಲಾಗಿದೆ.

ಗೌಡ ಕುಟುಂಬವನ್ನ ಬಹಿಷ್ಕಾರ ಮಾಡಿದ ಊರಗೌಡ.!

ಹೌದು.! 2012 ರಲ್ಲಿ ಸಂಜಯ್‌ ಬಂಟ ಗೌಡ ಎನ್ನುವ ಹಾಲಕ್ಕಿ ಸಮುದಾಯಕ್ಕೆ ಸೇರಿದ ಯುವಕನ ಮದುವೆಯ ಸಂದರ್ಭದಲ್ಲಿ ಊರಗೌಡ ಆನಂದು ಗೌಡನಿಗೆ ಮದುವೆ ಆಮಂತ್ರಣವನ್ನು ನೀಡಿರಲಿಲ್ಲ. ಈ ಹಿಂದೆ ಆನಂದು ಗೌಡ ನಿಗೆ ಮತ್ತು ಈ ಕುಟುಂಬಕ್ಕೆ ದಾಯಾದಿ ಜಗಳವಿತ್ತು. ಹೀಗಾಗಿ ಆತನಿಗೆ ವೀಳ್ಯ ನೀಡಿರಲಿಲ್ಲ. ಇದನ್ನು ದ್ವೇಷದಲ್ಲಿಟ್ಟುಕೊಂಡ ಆನಂದುಗೌಡ ಹಾಲಕ್ಕಿ ಸಮುದಾಯದವರನ್ನ ಒಟ್ಟು ಸೇರಿಸಿ, ಊರ ಗೌಡ ನಾನಿದ್ದರೂ ನನಗೆ ಮದುವೆಗೆ ಆಮಂತ್ರಣ ನೀಡಿಲ್ಲ. ಆ ಕುಟುಂಬವನ್ನ ಬಹಿಷ್ಕಾರ ಮಾಡುವಂತೆ ಆದೇಶ ಮಾಡುತ್ತೆನೆ ಎಂದು ಜನಾಂಗದ ಕೂಟದಲ್ಲಿ ಠರಾವು ಪಾಸ್ ಮಾಡುತ್ತಾನೆ.

ಆ ಕುಟುಂಬದೊಂದಿಗೆ ಮಾತನಾಡುವಂತಿಲ್ಲ.! ಕಿರಾಣಿ ಅಂಗಡಿಗಳಲ್ಲಿ ವಸ್ತುಗಳನ್ನ ಕೊಡುವಂತಿಲ್ಲ.!

ಈ ಠರಾವಿನಂತೆ ಯಾರೇ ಹಾಲಕ್ಕಿ ಸಮುದಾಯದವರು ಈ ಕುಟುಂಬದೊಂದಿಗೆ ಮಾತನಾಡುವಂತಿಲ್ಲ. ಕಿರಾಣಿ ಅಂಗಡಿಗಳಲ್ಲಿ ವಸ್ತುಗಳನ್ನು ನೀಡುವಂತಿಲ್ಲ. ಒಂದು ವೇಳೆ ನಿಯಮ ಮೀರಿದರೆ ದಂಡ ವಿಧಿಸಲಾಗುತ್ತೆ ಮತ್ತು ಅವರಿಗೂ ಸಮುದಾಯದಿಂದ ಬಹಿಷ್ಕಾರ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡುತ್ತಾನೆ. ಇದರಿಂದ ಆ ಕುಟುಂಬದೊಂದಿಗೆ ಸಂಪರ್ಕವಿಲ್ಲದೇ ಅವರನ್ನು ದೂರ ಇಡುವ ಮೂಲಕ ಬಹಿಷ್ಕರಿಸಿದೆ.

10 ವರ್ಷಗಳಿಂದ ಬಹಿಷ್ಕಾರದ ಶಾಪದಲ್ಲಿ ಬದುಕುತ್ತಿರುವ ಕುಟುಂಬ.!

ಇನ್ನು ಕಳೆದ ಹತ್ತು ವರ್ಷದಿಂದಲೂ ಈ ಕುಟುಂಬ ತಮ್ಮದೇ ಜನಾಂಗದಿಂದ ಬಹಿಷ್ಕಾರಕ್ಕೊಳಗಾಗಿ ಬದುಕುತ್ತಿದೆ. ಇನ್ನು ಬಹಿಷ್ಕಾರಕ್ಕೊಳಗಾದ್ದರಿಂದ ಕುಟುಂಬದ ಮಗಳ ಮದುವೆ ಸಹ ಮಾಡಲಾಗದೇ ಈ ಕುಟುಂಬ ನೋವು ಪಡುವ ಸ್ಥಿತಿ ಈ ಬಹಿಷ್ಕಾರ ತಂದೊಡ್ಡಿದೆ. ಹೀಗಾಗಿ ಹಲವು ವರ್ಷದಿಂದ ಈ ಕುಟುಂಬ ತಮ್ಮ ನೋವು ಹೇಳಿಕೊಳ್ಳದೇ ಹಾಗೆಯೇ ಎಲ್ಲವನ್ನು ನುಂಗಿಕೊಂಡು ಬದುಕಿತ್ತು. ಆದರೇ ಇದೀಗ ಜಿಲ್ಲಾಧಿಕಾರಿಗಳಿಗೆ ಈ ಕುಟುಂಬ ದೂರು ನೀಡಿದ್ದು ತಮಗೆ ನ್ಯಾಯ ಕೊಡಿಸುವಂತೆ ಬೇಡಿಕೊಂಡಿದ್ದಾರೆ.

ಒಟ್ಟಿನಲ್ಲಿ ಸ್ವತಂತ್ರ ಭಾರತ 75 ವರ್ಷ ಕಳೆದರೂ ಇಂತಹ ಅನಿಷ್ಟ ಪದ್ಧತಿಗಳು ಇನ್ನು ಚಾಲ್ತಿಯಲ್ಲಿವೆ ಅಂದ್ರೆ ನಿಜಕ್ಕೂ ದುರಾದೃಷ್ಟವೇ ಸರಿ. ಇನ್ನಾದರೂ ಸಮುದಾಯದ ಜನ ಎಚ್ಚೆತ್ತು ಯಾರೋ ಮಾಡುವ ನಿಯಮಗಳಿಗೆ ತಲೆ ಭಾಗದೆ ಸ್ವತಂತ್ರ ನಿರ್ಧಾರಗಳಿಂದ ಜೀವನ ನಡೆಸಬೇಕು. ಸಂಬಂಧಪಟ್ಟ ಅಧಿಕಾರಿಗಳು ಈ ಕೂಡಲೇ ಕ್ರಮ ತೆಗೆದುಕೊಂಡು ಇಂತಹ ಅನಿಷ್ಟ ಪದ್ದತಿಗೆ ಮುಕ್ತಿ ಹಾಡಬೇಕಿದೆ.