ತುಮಕೂರು: ಹಿಂದೂ ಅರ್ಚಕನೊಬ್ಬ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು ಬಳಿಕ ಮುಂಜಿಗೆ ಹೆದರಿ ಮರಳಿ ಸ್ವ ಧರ್ಮಕ್ಕೆ ವಾಪಸ್ಸಾದ ಘಟನೆ ತುಮಕೂರು ಗ್ರಾಮಾಂತರದ ಹೀರೇಹಳ್ಳಿಯಲ್ಲಿ ನಡೆದಿದೆ. ಎಚ್.ಆರ್ ಚಂದ್ರಶೇಖರಯ್ಯ ಮತಾಂತರಗೊಂಡ ಅರ್ಚಕ.
ಈತ ಪತ್ರಿಕೆಯಲ್ಲಿ ಅಧಿಕೃತ ಪ್ರಕಟಣೆ ಕೊಟ್ಟು ಮತಾಂತರವಾಗಿದ್ದ. ಬಳಿಕ ಮುಬಾರಕ್ ಪಾಷಾ ಎಂದು ಹೆಸರು ಬದಲಾವಣೆ ಮಾಡಿಕೊಂಡಿದ್ದ. ಆದರೆ ಸಕ್ಕರೆ ಕಾಯಿಲೆ ಇರುವುದರಿಂದ ಮುಂಜಿ ಮಾಡಲು ಸಾಧ್ಯವಾಗದೇ ಮುಂಜಿಗೆ ಹೆದರಿ ಘರ್ ವಾಪಸ್ಸಿಯಾಗಿದ್ದಾನೆ.
ಎಚ್.ಆರ್. ಚಂದ್ರಶೇಖರ್ ಹೀರೇಹಳ್ಳಿಯ ಓಂಕಾರೇಶ್ವರ ದೇವಸ್ಥಾನದ ಅರ್ಚಕನಾಗಿದ್ದ. ಮುಂಜಿ ಮಾಡಿದ್ರೆ ಮಾತ್ರ ಮುಸ್ಲಿಂಮರಲ್ಲಿ ಸರಿಯಾಗಿ ಶವ ಸಂಸ್ಕಾರ ಮಾಡೋದು ಎಂಬ ಕಾರಣಕ್ಕೆ ಮುಂಜಿಗೆ ಮುಂದಾಗಿದ್ದ. ಮುಸ್ಲಿಂ ಸಮುದಾಯದ ಏರಿಯಾದಲ್ಲೇ ಈತ ಮನೆಕಟ್ಟಿಕೊಂಡಿದ್ದ.
ತುಮಕೂರು ಗ್ರಾಮಾಂತರದ ಜೆ.ಡಿ.ಎಸ್. ಮುಖಂಡ ತನ್ವಿರ್ ಜೊತೆ ಹೆಚ್ಚಿನ ಒಡನಾಟದಲ್ಲಿದ್ದ ಎನ್ನಲಾಗಿದ್ದು ತನ್ವಿರ್ ಅವರಿಗೆ ಸೇರಿದ ಮಸೀದಿಗೆ ಹೋಗಿ ಮತಾಂತರಗೊಂಡಿದ್ದ. ಇನ್ನು ಮತಾಂತರದ ಸುದ್ದಿ ಕೇಳುತಿದ್ದಂತೆ ಮಾಜಿ ಸಚಿವ ಸೊಗಡು ಶಿವಣ್ಣ ಮನೆಗೆ ದೌಡಾಯಿಸಿದರು. ಸೊಗಡು ಶಿವಣ್ಣರ ಮನವೊಲಿಕೆ ಹಾಗೂ ಮುಂಜಿಗೆ ಅಂಜಿ ತಾನು ವಾಪಸ್ ಬಂದಿದ್ದೇನೆ ಎಂದು ಮಾಧ್ಯಮಗಳ ಮುಂದೆ ಚಂದ್ರಶೇಖರ್ ಹೇಳಿಕೆ ನೀಡಿದ್ದಾನೆ.
ಅಣ್ಣತಮ್ಮಂದಿರರ ನಡುವಿನ ಆಸ್ತಿ ಜಗಳದಿಂದ ಬೇಸತ್ತಿದ್ದ ಚಂದ್ರಶೇಖರ್ ಯಾರೂ ನನ್ನ ಸಹಾಯಕ್ಕೆ ಬರುವುದಿಲ್ಲ ಎಂದು ಮನ ನೊಂದಿದ್ದ ಎನ್ನಲಾಗಿದೆ. ಹೀಗಾಗಿ ಮತಾಂತರ ಆಗಲು ಚಂದ್ರಶೇಖರ್ ಬಯಸಿದ್ದ ಎಂದು ತಿಳಿದು ಬಂದಿದೆ.