ಬಡವರ, ದೀನದಲಿತರ, ನಿರ್ಗತಿಕರ ಆಶಾಕಿರಣ ದಿ. ದೇವರಾಜ ಅರಸು

ಹೊನ್ನಾವರ: ಕರ್ನಾಟಕ ರಾಜಕಾರಣದಲ್ಲಿ ದಶಕಗಳ ಕಾಲ ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿ, ಬಡವರ, ದೀನದಲಿತರ, ನಿರ್ಗತಿಕರ ಆಶಾಕಿರಣವಾಗಿ ಬಾಳಿದ ಶ್ರೇಯಸ್ಸು ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ರವರಿಗೆ ಸಲ್ಲುತ್ತದೆ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ನುಡಿದರು.

ಅವರು ಶನಿವಾರ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ರವರ 107 ನೇ ಜನ್ಮದಿನಾಚರಣೆ ಮತ್ತು ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿಯವರ 78 ನೇ ಜನ್ಮದಿನದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಸೂರಿಲ್ಲದ ಸಮಾಜದ ಎಲ್ಲಾ ವರ್ಗದ ದುರ್ಬಲರಿಗೆ ಸೂರು ನೀಡಿದ ಶ್ರೇಯಸ್ಸು ದಿ. ದೇವರಾಜ ಅರಸು ರವರಿಗೆ ಸಲ್ಲುತ್ತದೆ. ಅರಸು ಅವರು ಬಡವರ ಮತ್ತು ಶೋಷಿತ ವರ್ಗದ ಪಾಲಿನ ದೇವರು ಎಂದರು.

ದಿ. ದೇವರಾಜ ಅರಸು ಮತ್ತು ದಿ. ರಾಜೀವ ಗಾಂಧಿಯವರ ಭಾವಚಿತ್ರಕ್ಕೆ ಕಾರ್ಯಕರ್ತರು ಪುಷ್ಪ ನಮನ ಸಲ್ಲಿಸಿ ಮೌನ ಆಚರಿಸಿದರು.

ಹೊನ್ನಾವರ ನಗರ ಘಟಕದ ಅಧ್ಯಕ್ಷ ಚಂದ್ರಶೇಖರ ಚಾರೋಡಿ, ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಮೋಹನ ಆಚಾರಿ, ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಜಿಕ್ರಿಯಾ ಶೇಖ್, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಮಹೇಶ ಮತ್ತಿತರರು ಉಪಸ್ಥಿತರಿದ್ದರು.