ಸಿಬಿಐ – ಇಡಿ ನನ್ನನ್ನು ಬಂಧಿಸಬಹುದು, ಅದಕ್ಕೆಲ್ಲಾ ಹೆದರುವುದಿಲ್ಲ – ಸಿಸೋಡಿಯಾ

ನವದೆಹಲಿ: ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಸಿಬಿಐ – ಇಡಿ ಅಧಿಕಾರಿಗಳು ನನ್ನನ್ನು ಬಂಧಿಸುವ ಸಾಧ್ಯತೆಗಳಿದೆ. ನಾವು ಯಾವುದಕ್ಕೂ ಹೆದರುವುದಿಲ್ಲ, ನಮ್ಮನ್ನು ಒಡೆಯಲು ಸಾಧ್ಯವಿಲ್ಲ ಎಂದು ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಹೇಳಿದ್ದಾರೆ.

ತಮ್ಮ ಮೇಲೆ ನಡೆದ ಸಿಬಿಐ ದಾಳಿಗೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಿನ್ನೆ ನನ್ನ ನಿವಾಸಕ್ಕೆ ಸಿಬಿಐ ಅಧಿಕಾರಿಗಳು ಬಂದಿದ್ದರು, ಶಿಕ್ಷಣ ಇಲಾಖೆಯ ಕಚೇರಿ ಮೇಲೂ ದಾಳಿ ನಡೆಸಿದ್ದಾರೆ. ಎಲ್ಲಾ ಅಧಿಕಾರಿಗಳು, ಎರಡೂ ಸ್ಥಳಗಳಲ್ಲಿ ಅಧಿಕಾರಿಗಳು ತುಂಬಾ ಚೆನ್ನಾಗಿ ವರ್ತಿಸಿದರು, ಅವರು ಹೈಕಮಾಂಡ್‌ನ ಆದೇಶಗಳನ್ನು ಪಾಲಿಸಬೇಕಾಗಿತ್ತು, ಆದರೆ ತುಂಬಾ ಚೆನ್ನಾಗಿ ವರ್ತಿಸಿದ್ದಕ್ಕಾಗಿ ನಾನು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ.

ಅಬಕಾರಿ ನೀತಿಯ ಕಾರಣದಿಂದಾಗಿ ಇಡೀ ವಿವಾದವನ್ನು ಸೃಷ್ಟಿಸಿಲಾಗಿದೆ. ಆದರೆ ಇದು ದೇಶದ ಅತ್ಯುತ್ತಮ ನೀತಿಯಾಗಿದೆ. ನಾವು ಅದನ್ನು ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯಿಂದ ಅನ್ವಯಿಸುತ್ತಿದ್ದೇವೆ. ನೀತಿಯನ್ನು ವಿಫಲಗೊಳಿಸಲು ಸಂಚು ರೂಪಿಸಿ ದೆಹಲಿ ಎಲ್‌ಜಿ ತನ್ನ ನಿರ್ಧಾರವನ್ನು ಬದಲಾಯಿಸದಿದ್ದರೆ, ದೆಹಲಿ ಸರ್ಕಾರವು ಪ್ರತಿ ವರ್ಷ ಕನಿಷ್ಠ 10,000 ಕೋಟಿ ರೂಪಾಯಿಗಳನ್ನು ಪಡೆಯುತ್ತಿತ್ತು ಎಂದು ಎಲ್‌ಜಿ ವಿರುದ್ಧ ಸಿಸೋಡಿಯಾ ವಾಗ್ದಾಳಿ ನಡೆಸಿದರು.

ಮುಂಬರುವ 2024ರ ಲೋಕಸಭೆ ಚುನಾವಣೆ ಬಿಜೆಪಿ V/s ಆಪ್ ನಡುವೆ ಇರಲಿದೆ. ಬಿಜೆಪಿ ಆಪ್ ಕಾರ್ಯಗಳಿಂದ ಹೆದರಿದ್ದಾರೆ. ಹೀಗಾಗಿ ನಮ್ಮನ್ನು ತಡೆಯುವ ಪ್ರಯತ್ನಗಳು ನಡೆಯುತ್ತಿದೆ. ಇದಕ್ಕೆ ನಾವು ಹೆದರುವುದಿಲ್ಲ, ಬಗ್ಗುವುದಿಲ್ಲ ಎಂದು ತಿರುಗೇಟು ನೀಡಿದರು.