ಹಿಮಾಚಲ ಪ್ರದೇಶ: ಚಂಬಾ ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ ಸುರಿದ ಮಳೆಯಿಂದ ಭೂಕುಸಿತ ಉಂಟಾಗಿದೆ. ಘಟನೆಯಲ್ಲಿ ಮನೆ ಕುಸಿದು ಮೂವರು ಸಾವನ್ನಪ್ಪಿದ್ದಾರೆ. ರಾಜ್ಯದ ಮಂಡಿ ಜಿಲ್ಲೆಯಲ್ಲಿ ಹಠಾತ್ ಪ್ರವಾಹದ ವೇಳೆ ಮನೆಗಳಿಗೆ ನೀರು ನುಗ್ಗಿ ಹಲವಾರು ವಾಹನಗಳು ಹಾನಿಗೊಳಗಾಗಿವೆ. ಹಲವಾರು ಗ್ರಾಮಸ್ಥರು ಸಿಲುಕಿಕೊಂಡು ಸಂಕಷ್ಟದಲ್ಲಿದ್ದಾರೆ. ಬೆಳಗಿನ ಜಾವ 4.15 ರ ವೇಳೆಗೆ ಹಠಾತ್ ಪ್ರವಾಹದ ನಂತರ ಬಾಲ್, ಸದರ್, ಥುನಾಗ್, ಮಂಡಿ ಮತ್ತು ಲಮಾಥಾಚ್‌ನಲ್ಲಿ ಹಲವಾರು ಮನೆಗಳು ಮತ್ತು ಅಂಗಡಿಗಳಿಗೆ ನೀರು ನುಗ್ಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿಮಾಚಲ ಪ್ರದೇಶದ ವಿಪತ್ತು ನಿರ್ವಹಣಾ ಇಲಾಖೆಯು ರಾಜ್ಯದಲ್ಲಿ ಆಗಸ್ಟ್ 25 ರವರೆಗೆ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ನೀಡಿದ್ದು ಭೂಕುಸಿತದ ಎಚ್ಚರಿಕೆಯನ್ನು ನೀಡಿದೆ. ಮುಂದಿನ 24 ಗಂಟೆಗಳಲ್ಲಿ ಮಳೆಯ ಪ್ರಮಾಣವು ಹೆಚ್ಚಾಗುವ ಸಾಧ್ಯತೆಯಿದೆ.
ಭೂಕುಸಿತಗಳು, ಹಠಾತ್ ಪ್ರವಾಹಗಳು, ಮೇಘಸ್ಫೋಟಗಳು, ಬಂಡೆ ಕುಸಿತಗಳು, ನದಿಗಳಲ್ಲಿ ನೀರಿನ ಮಟ್ಟದಲ್ಲಿ ಹಠಾತ್ ಹೆಚ್ಚಳ ಮುಂತಾದ ಅವಘಡಗಳು ಸಂಭವಿಸಬಹುದಾದ ಕಾರಣ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ತಿಳಿಸಲಾಗಿದೆ.