ಬೆಳಗಾವಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಭಾವಚಿತ್ರವನ್ನು ಯಾರೋ ಕಿಡಿಗೇಡಿಗಳು ಹರಿದು ಹಾಕಿರುವ ಘಟನೆ ಗೋಕಾಕ ತಾಲೂಕಿನ ಖನಗಾಂವ ಗ್ರಾಮದಲ್ಲಿ ನಡೆದಿದೆ. ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.
ಗ್ರಾಮದ ರಸ್ತೆಗೆ ರಾಯಣ್ಣ ಸರ್ಕಲ್ ಎಂದು ನಾಮಕರಣ ಮಾಡಲಾಗಿತ್ತು. ನಾಮಕರಣ ಮಾಡಿ ರಾಯಣ್ಣ ಭಾವಚಿತ್ರದ ಫ್ಲೆಕ್ಸ್ ಬೋರ್ಡ್ ಹಾಕಲಾಗಿತ್ತು. ಈ ಬೋರ್ಡ್‌ನಲ್ಲಿದ್ದ ಸಂಗೊಳ್ಳಿ ರಾಯಣ್ಣ ಭಾವಚಿತ್ರವನ್ನ ಯಾರೋ ಕಿಡಿಗೇಡಿಗಳು ತಡರಾತ್ರಿ ಹರಿದು ವಿಕೃತಿ ಮೆರೆದಿದ್ದಾರೆ.
ಕಿಡಿಗೇಡಿಗಳ ಕೃತ್ಯವನ್ನು ಖಂಡಿಸಿ ಗ್ರಾಮದಲ್ಲಿ ರಾಯಣ್ಣ ಅಭಿಮಾನಿಗಳಿಂದ ಪ್ರತಿಭಟನೆ ನಡೆಸಲಾಗಿದೆ. ಟಾಯರ್‌ಗೆ ಬೆಂಕಿ ಹಚ್ಚಿ ರಾಯಣ್ಣ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣವಿದೆ. ಗೋಕಾಕ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಗೋಕಾಕ್ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.