ಮುಂಡಗೋಡ: ಲೊಯೋಲ ಶಿಕ್ಷಣ ಸಂಸ್ಥೆಯ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ರಾಖಿ ಬಿಚ್ಚಿಸಿದ್ದಾರೆಂದು ಆರೋಪಿಸಿ, ಪಾಲಕರು ಹಾಗೂ ಹಿಂದೂಪರ ಸಂಘಟನೆಗಳು ಸಂಸ್ಥೆಯ ಮುಂದೆ ಪ್ರತಿಭಟನೆ ನಡೆಸಿ ಆಡಳಿತ ಮಂಡಳಿಯವರನ್ನು ತರಾಟೆ ತೆಗೆದುಕೊಂಡಿದ್ದಾರೆ.
ಶಾಲೆಯ ಆವರಣದಲ್ಲಿ ಪ್ರಾರ್ಥನೆ ಮಾಡುವಾಗ ವಿದ್ಯಾರ್ಥಿಗಳು ಕೈಗೆ ಕಟ್ಟಿಕೊಂಡ ರಾಖಿಯನ್ನು ತೆಗೆಯುವಂತೆ ಲೊಯೋಲ ಶಾಲೆಯ ಶಿಕ್ಷಕಿ ಸೂಚಿಸಿದ್ದಾರೆ. ಅದರಂತೆ ಮಕ್ಕಳು ತಮ್ಮ ಕೈಗೆ ಕಟ್ಟಿಕೊಂಡ ರಾಖಿಯನ್ನು ಪರಸ್ಪರವಾಗಿ ಕತ್ತರಿಯಿಂದ ಕಟ್ ಮಾಡಿಕೊಂಡಿದ್ದೇವೆ ಎಂದು ಮನೆಗೆ ಹೋದ ವಿದ್ಯಾರ್ಥಿಗಳು ಪಾಲಕರಿಗೆ ವಿಷಯ ತಿಳಿಸಿದ್ದಾರೆ.
ಶಾಲೆಯಲ್ಲಿ ರಾಖಿ ಬಿಚ್ಚಿಸಿದ್ದನ್ನು ವಿರೋಧಿಸಿದ ಕೆಲವು ಶಿಕ್ಷಕರು
ಲೊಯೋಲ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯವರು ರಾಖಿಯನ್ನು ತೆಗೆದು ಹಾಕುವಂತೆ ಸೂಚಿಸುತ್ತಿದ್ದಾಗ ಶಾಲೆಯ ಕೆಲವು ಶಿಕ್ಷಕರು ವಿರೋಧಿಸಿ ಜಗಳ ಕೂಡ ನಡೆಸಿದ್ದಾರೆ ಎನ್ನಲಾಗಿದೆ. ಆದರೂ ಕೂಡ ಸಂಸ್ಥೆಯವರು ಯಾರ ಮಾತಿಗೂ ಕ್ಯಾರೆ ಮಾಡಿಲ್ಲವಂತೆ.
ಸಂಸ್ಥೆಯ ವಿರುದ್ಧ ಧಿಕ್ಕಾರ ಕೂಗಿದ ಪಾಲಕರು ಹಿಂದೂಪರ ಸಂಘಟನೆಗಳು
ನಮ್ಮ ಧರ್ಮ ಆಚಾರ ವಿಚಾರಗಳನ್ನು ಹೇಗೆ ಆಚರಿಸಬೇಕು ಎಂದು ನಮಗೆ ಗೊತ್ತು ರಕ್ಷಾ ಬಂಧನ ಹಬ್ಬದಲ್ಲಿ ಕಟ್ಟಿಸಿದ ರಾಖಿಯನ್ನು ವಿದ್ಯಾರ್ಥಿಗಳ ಕೈಯಿಂದ ತೆಗೆಸುವ ಯಾವ ಅರ್ಹತೆಯೂ ನಿಮಗಿಲ್ಲಾ. ನಮ್ಮ ವಿದ್ಯಾರ್ಥಿಗಳಿಂದ ರಾಖಿ ಬಿಚ್ಚಿಸಿ ನಮಗೆ ಅವಮಾನ ಮಾಡಿದ್ದಿರಿ ಎಂದು ರೊಚ್ಚಗೆದ್ದ ಪ್ರತಿಭಟನಾಕಾರರು ಸಂಸ್ಥೆಯ ವಿರುದ್ಧ ದಿಕ್ಕಾರ ಕೂಗಿದರು.
ಠಾಣೆಯಲ್ಲಿ ಬಗೆಹರಿಸಲು ಪೊಲೀಸರ ಪ್ರಯತ್ನ
ಹಿಂದೂಪರ ಸಂಘಟನೆಗಳ ಗಮನಕ್ಕೆ ಬಂದಿದ್ದರಿಂದ ಶಾಲೆಗೆ ಮುತ್ತಿಗೆ ಹಾಕಲು ಸರ್ವ ತಯಾರಿ ಮಾಡಿಕೊಂಡಿದ್ದರು. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಆಡಳಿತ ಕಮೀಟಿಯವರನ್ನು ಹಾಗೂ ಪ್ರಿನ್ಸಿಪಾಲ್ ಕರೆಯಿಸಿ ಠಾಣೆಯಲ್ಲಿ ಬಗೆಹರಿಸಲು ಪ್ರಯತ್ನಿಸಿದ್ದರು. ಹಿಂದೂಪರ ಸಂಘಟನೆಗಳು ಇದಕ್ಕೆ ಒಪ್ಪದೆ ಶಾಲೆಯ ಎದುರೆ ಪ್ರತಿಭಟನೆ ಮಾಡಲು ಪಟ್ಟು ಹಿಡಿದರು ಎನ್ನಲಾಗಿದೆ.
ಹಿಂದೂಪರ ಸಂಘಟನೆ ಹಾಗೂ ಪಾಲಕರಿಂದ ಶಾಲೆಯ ಎದುರು ಪ್ರತಿಭಟನೆ
ಆಡಳಿತ ಮಂಡಳಿ ಹಾಗೂ ರಾಖಿ ತೆಗೆಯುವಂತೆ ಹೇಳಿದ ಶಿಕ್ಷಕಿಯನ್ನು ಸ್ಥಳಕ್ಕೆ ಕರೆಸುವಂತೆ ಪ್ರತಿಭಟನಾಕಾರರು ಘೋಷಣೆ ಕೂಗುತ್ತಾ ಪಟ್ಟು ಹಿಡಿದರು. ಸ್ಥಳಕ್ಕೆ ಆಗಮಿಸಿದ ಆಡಳಿತ ಮಂಡಳಿಯ ಸದಸ್ಯ ಹಾಗೂ ಪ್ರಿನ್ಸಿಪಾಲ್ ಬಂದು ನಾವು ರಾಖಿ ತೆಗೆಯಲು ಹೇಳಿಲ್ಲಾ ಮಕ್ಕಳೆ ತೆಗೆದುಕೊಂಡು ಆಟ ಆಡುತ್ತಿದ್ದರು ಎಂದು ಹೇಳುತ್ತಿದ್ದಂತೆ ಪ್ರತಿಭಟನಾಕಾರರು ಮಕ್ಕಳ ಕೈಯಲ್ಲಿ ಕತ್ತರಿ ಹೇಗೆ ಬಂತು ಹಾಗಾದರೆ ಮನೆಯಿಂದ ತರುತ್ತಾರಾ ಎಂದು ಮರು ಪ್ರಶ್ನಿಸಿದರು. ಇದಕ್ಕೆ ಆಡಳಿತ ಮಂಡಳಿಯವರು ಮೌನವಾದರು.
ಹಿಂದೂಪರ ಸಂಘಟನೆಗಳ ಆಕ್ರೋಶ
ಈ ಸಂಸ್ಥೆಯಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ ಆದರೆ ಇತ್ತೀಚಿನ ದಿನಗಳಲ್ಲಿ ಹಿಂದೂಗಳ ಭಾವನೆಗೆ ದಕ್ಕೆತರುವ ಕೆಲಸವನ್ನು ಸಂಸ್ಥೆಯವರು ಮಾಡುತ್ತಿದ್ದಾರೆ. ಹಿಂದೂಗಳ ಪವಿತ್ರ ಅಣ್ಣ ತಂಗಿಯರ ರಾಖಿಯನ್ನು ತೆಗೆಯುವಂತೆ ಹೇಳಲು ಇವರ್ಯಾರು. ಈ ಸಂಸ್ಥೆಯಲ್ಲಿ ಎಲ್ಲ ಧರ್ಮದ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಾರೆ. ಹಿಂದೂಗಳ ಬಗ್ಗೆ ಇಷ್ಟೇಕೆ ಕೋಪ ಎಂದು ಅಸಮಾದಾನ ವ್ಯಕ್ತಪಡಿಸಿದರು.
ಸಂಘಟನೆಗಳಿಂದ ಲೊಯೋಲ ಸಂಸ್ಥೆಯವರಿಗೆ ಖಡಕ್ ಸೂಚನೆ
ನಿಮ್ಮ ಸಂಸ್ಥೆಗಳಲ್ಲಿ ನಮ್ಮ ಮಕ್ಕಳು ಶಾಲೆಗೆ ಬರುತ್ತಾರೆ. ಪಟ್ಟಣದಲ್ಲಿರುವ ನಿಮ್ಮ ಸಂಸ್ಥೆಗಳಲ್ಲಿ ನಿಮ್ಮದೇ ರೂಲ್ಸಗಳನ್ನು ಮಾಡಬೇಡಿ. ಅನೇಕ ಮಕ್ಕಳಿಂದ ನಿಮ್ಮ ಸಂಸ್ಥೆಯ ಬಗ್ಗೆ ದೂರುಗಳು ಬಂದಿವೆ. ಬಳೆಗಳನ್ನು ಧರಿಸುವಂತಿಲ್ಲ ಕುಂಕುಮ ಇಡುವಂತಿಲ್ಲ, ಕಾಶಿದಾರವನ್ನು ಧರಿಸುವಂತಿಲ್ಲ ಎಂದೂ ಮಕ್ಕಳಿಗೆ ಇನ್ನೊಮ್ಮೆ ಹೇಳಿದರೆ ಪರಿಣಾಮ ಸರಿಯಾಗಿರುವುದಿಲ್ಲ. ಈಗ ನಡೆದ ಘಟನೆ ಮತ್ತೆ ಮರುಕಳಿಸಿದರೆ ಅದು ಬೇರೆಯೇ ಆಗುತ್ತದೆ ಎಂದು ಸಾಲಗಾಂವ ಗ್ರಾಮ ಪಂಚಾಯತ ಉಪಾಧ್ಯಕ್ಷ ಸುನೀಲ್ ಲಮಾಣೆ, ವಿವಿಧ ಸಂಘಟಕರು ಹಾಗೂ ಪಾಲಕರು ಖಡಕ್ಕಾಗಿ ಸೂಚಿಸಿದರು.
ಶಾಲೆಯ ಅವ್ಯವಸ್ಥೆಯ ಬಗ್ಗೆ ಪಾಲಕರ ಆಕ್ರೋಶ
ಹಿಂದೂಗಳು ರಾಖಿ ಹಬ್ಬವನ್ನು ಮೊದಲಿನಿಂದಲೂ ಆಚರಿಸಿಕೊಂಡು ಬರುತ್ತಿದ್ದೇವೆ. ಆದರೆ ಶಾಲೆಯ ಪ್ರಾರ್ಥನೆಗೆ ನಿಲ್ಲುವ ಸಮಯದಲ್ಲಿ ಮಕ್ಕಳಿಗೆ ಮೈಕ್ ಮೂಲಕ ಹೇಳಿ ಮಕ್ಕಳ ಕೈಯಲ್ಲಿ ಇದ್ದ ರಾಖಿಯನ್ನು ಹಾಗೂ ಕಾಶಿ ದಾರವನ್ನು ತೆಗೆಯುವಂತೆ ಹೇಳುತ್ತಾರೆ. ಮಕ್ಕಳ ಕೈಯನ್ನು ನೋಡಿದಾಗ ನಮಗೆ ಬೇಸರವಾಗುತ್ತದೆ.
ಈ ಶಾಲೆಯಲ್ಲಿ ಕುಂಕುಮ, ಕೈಯಲ್ಲಿರುವ ಬಳೆ, ಕೇಸರಿ ದಾರ, ಕೊರಳಿನಲ್ಲಿ ಹಾಕಿದ ಸರಗಳನ್ನು ತೆಗೆಸಲಾಗುತ್ತದೆ. ಅಲ್ಲದೆ ಬಿಸಿ ಊಟದಲ್ಲಿ ಹುಳಗಳಿದ್ದರೂ ಅದನ್ನೆ ಹಾಕಲಾಗುತ್ತದೆ. ಇದರ ಬಗ್ಗೆ ವಿದ್ಯಾರ್ಥಿಗಳು ಶಾಲೆಯಲ್ಲಿ ಪ್ರಶ್ನಿಸಿದರೆ ಅದನ್ನೆಲ್ಲ ಮನೆಗೆ ಹೇಳದೆ ಊಟ ಮಾಡಿ ಎಂದು ಗದರಿಸುತ್ತಾರೆ. ನೂರಾರು ಮಕ್ಕಳು ಊಟ ಮಾಡಿದ ಪ್ಲೇಟನ್ನು ಎರಡು ತುಂಬಿದ ಬಕೆಟ್‌ನಲ್ಲಿ ತೋಳೆಸುತ್ತಾರೆ ಎಂದು ಆರೋಪಿಸಿದರು. ಇದರಿಂದ ಮಕ್ಕಳ ಆರೋಗ್ಯ ಹಾಳಾದರೆ ಯಾರು ಹೊಣೆ ಎಂದು ಆಡಳಿತ ಮಂಡಳಿಯರಿಗೆ ಹಾಗೂ ಬಿಇಓ ಗೆ ಪ್ರಶ್ನಿಸಿದ್ದಾರೆ.
ಕ್ಷಮೆಯಾಚಿಸಿದ ಲೋಯೊಲ ಸಂಸ್ಥೆಯ ಆಡಳಿತ ಮಂಡಳಿ
ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಲಾಗುವುದು ಆ ಶಿಕ್ಷಕರಿಗೆ ಏನು ನಿರ್ದೇಶನ ನೀಡುತ್ತೇವೆ ಎಂದು ಕ್ಷಮೆ ಕೇಳಿದರು. ನಂತರ ಪಾಲಕರು, ಹಿಂದೂ ಸಂಘಟನೆಗಳು ಪ್ರತಿಭಟನೆಯನ್ನು ಹಿಂಪಡೆದರು.
ಬೇರೆಡೆಯಿಂದ ಈ ಶಾಲೆಗೆ ಬಂದ ಮುಖ್ಯೋಪಾಧ್ಯಾಯರಿಂದ ಸಮಸ್ಯೆ ಸಂಭವಿಸಿದೆ. ಇಲ್ಲಿಯ ಶಿಷ್ಟಾಚಾರ ಮರೆತು ಅವರು ಮೂಲ ಶಾಲೆಯಲ್ಲಿ ಕಾರ್ಯನಿರ್ವಹಿಸುವ ಪದ್ದತಿಯನ್ನು ಇಲ್ಲಿ ಅನುಸರಿಸಿದ್ದರಿಂದ ಇಲ್ಲಿ ಸಮಸ್ಯೆ ಉಂಟಾಗಿದೆ. ಮುಂದೆ ಈ ರೀತಿ ಆಗದಂತೆ ಆಡಳಿತ ಮಂಡಳಿ ಹಾಗೂ ಶಿಕ್ಷಣ ಇಲಾಖೆಯವರು ಸೇರಿ ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ತೊಡಕುಗಳು ಆಗದಂತೆ ಸುಸೂತ್ರವಾಗಿ ಪಾಲಕ, ಪೋಷಕರ ಸಹಕಾರದೊಂದಿಗೆ ಶಾಲೆ ನಡೆಸುತ್ತೇವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಎಸ್.ಪಟಗಾರ ಹೇಳಿದರು.
ಈ ಪ್ರತಿಭಟನೆಯಲ್ಲಿ ಮುಂಖಡರಾದ ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ ಪ್ರಕಾಶ ಬಡಗೇರ, ಶ್ರೀರಾಮ ಸೇನೆಯ ಅಧ್ಯಕ್ಷ ಮಂಜುನಾಥ ಹರಿಜನ, ಭಜರಂಗದಳದ ಅಧ್ಯಕ್ಷ ಮಂಜುನಾಥ ಪವಾರ್ ಶಂಕರ ಲಮಾಣಿ, ಗೋ ಪರಿವಾರದ ರಕ್ಷಕ ವಿಶ್ವನಾಥ ಭಜಂತ್ರಿ, ರಾಮಸೇನೆ ಅದ್ಯಕ್ಷ ಷಣ್ಮುಖ ಕೊಳುರ ಸಾಲಗಾಂವ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುನಿಲ್ ಲಮಾಣಿ, ಮುಖಂಡರಾದ ಸಂತೋಷ ತಳವಾರ, ಗಣೇಶ ಶಿರಾಲಿ, ಸಾಮಾಜಿಕ ಕಾರ್ಯಕರ್ತ ಶ್ರೀಧರ ಉಪ್ಪಾರ, ಮಂಗೇಶ ಲಮಾಣಿ ಸೇರಿದಂತೆ ಪಾಲಕರು ಉಪಸ್ಥಿತರಿದ್ದರು.