ಕಾರವಾರ: ಶಾಸಕಿ ರೂಪಾಲಿ ಎಸ್.ನಾಯ್ಕ ಅವರ ಜನ್ಮ ದಿನದ ಹಿನ್ನೆಲೆಯಲ್ಲಿ ಯುವ ಅಭಿಮಾನಿಗಳು ಶಾಸಕರಿಗೆ ಸೇಬು ಹಣ್ಣಿನ ಬೃಹತ್ ಹಾರ ಹಾಕುವ ಮೂಲಕ ಗಮನ ಸೆಳೆದರು. ಜತೆಗೆ ಕಾರವಾರ ಹಾಗೂ ಅಂಕೋಲಾದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಶಾಸಕರು ತಮ್ಮ ಕಾರ್ಯಾಲಯಕ್ಕೆ ಬರುತ್ತಿದ್ದಂತೆ ಯುವ ಅಭಿಮಾನಿಗಳು ವಿಶೇಷವಾಗಿ ತಯಾರಿಸಲಾದ ಸೇಬು ಹಣ್ಣಿನ ಬೃಹತ್ ಹಾರವನ್ನು ಹಾಕಿ ಸಂಭ್ರಮಿಸಿದರು. ಜನ್ಮ ದಿನದ ಅಂಗವಾಗಿ ಬಿಜೆಪಿಯ ನಗರ ಹಾಗೂ ಗ್ರಾಮೀಣ ಮಂಡಲದ ಪದಾಧಿಕಾರಿಗಳು, ಕಾರ್ಯಕರ್ತರು, ಪ್ರಮುಖರು, ಅಭಿಮಾನಿಗಳು ವಿವಿಧೆಡೆ ಧಾರ್ಮಿಕ, ಆರೋಗ್ಯ ಶಿಬಿರ, ಅನ್ನದಾನ, ವೃಕ್ಷಾರೋಪಣ ಮತ್ತಿತರ ಕಾರ್ಯಕ್ರಮ ಸಂಘಟಿಸಿದ್ದರು.
ಅಂಕೋಲಾದಲ್ಲಿ ಆರೋಗ್ಯ ಶಿಬಿರ ನಡೆಯಿತು. ಈ ಶಿಬಿರದಲ್ಲಿ ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್ ಸ್ಕ್ರೀನಿಂಗ್ ಸೇರಿದಂತೆ ವಿವಿಧ ರೋಗಗಳ ತಪಾಸಣೆ, ಔಷದೋಪಚಾರ ನಡೆಸಲಾಯಿತು. ಕ್ರಿಸ್ತಮಿತ್ರ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ, ವೃಕ್ಷಾರೋಪಣ, ಹುಲಿದೇವರವಾಡದಲ್ಲಿ ಸಾರ್ವಜನಿಕರಿಗೆ ತೆಂಗಿನಸಸಿ ವಿತರಣೆ, ಅಜ್ಜಿಕಟ್ಟಾದ ಆಶ್ರಮದಲ್ಲಿ ಅನ್ನದಾನ ನಡೆಸಲಾಯಿತು. ಕಾರವಾರದ ಘಾಡಸಾಯಿ ಗ್ರಾಪಂ ವ್ಯಾಪ್ತಿಯ ಪಾರ್ಶ್ವವಾಯು ಪೀಡಿತ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿಯ ರೋಗಿಗಳು, ಸಿಬ್ಬಂದಿ ಹಾಗೂ ಆ ಭಾಗದ ಕಿವುಡ, ಮೂಕ ಮಕ್ಕಳಿಗೆ ಹಣ್ಣು ಹಂಪಲ ವಿತರಣೆ ಮಾಡಲಾಯಿತು.
ಅಂಕೋಲಾದ ಶಾಂತದುರ್ಗಾ ದೇವಾಲಯ, ಹಣಕೋಣ ಸಾತೇರಿ ದೇವಾಲಯ, ದುರ್ಗಾದೇವಿ ದೇವಸ್ಥಾನ, ಅಮದಳ್ಳಿ ವೀರಗಣಪತಿ ದೇವಾಲಯ, ಶೆಜ್ಜೇಶ್ವರ ದೇವಾಲಯ, ಕದ್ರಾ ಮಹಾಮ್ಮಾಯಾ ದೇವಾಲಯ ಮತ್ತಿತರ ದೇಗುಲಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಹಲವು ಗಣ್ಯರ ಭೇಟಿ
ವಿಧಾನ ಪರಿಷತ ಸದಸ್ಯ ಗಣಪತಿ ಉಳ್ವೇಕರ್, ನಗರಸಭಾ ಅಧ್ಯಕ್ಷ ಡಾ. ನಿತಿನ್ ಪಿಕಳೆ, ಉಪಾಧ್ಯಕ್ಷ ಪ್ರಕಾಶ ನಾಯ್ಕ್, ಯುವಮೋರ್ಚಾ ನಗರ ಅಧ್ಯಕ್ಷ ಶುಭಂ ಕಳಸ, ಪ್ರಧಾನ ಕಾರ್ಯದರ್ಶಿ ಅಮಿತ್ ನಾಯ್ಕ್, ನಾಗರಾಜ್ ದುರ್ಗೇಕರ, ಭರತ್ ಕುಡ್ತಲಕರ ಯುವಮೋರ್ಚಾ ತಂಡದ ಪ್ರಣವ ರಾಣೆ ಹಾಗೂ ಸದಸ್ಯರು, ಗ್ರಾಮ ಪಂಚಾಯಿತ ಅದ್ಯಕ್ಷರು, ಸದಸ್ಯರು ಮತ್ತಿತರರು ಆಗಮಿಸಿ, ಶುಭಾಶಯಗಳನ್ನು ಸಲ್ಲಿಸಿದರು.
ಗಣ್ಯರಿಂದ ಶುಭಾಶಯಗಳ ಮಹಾಪೂರ
ಶಾಸಕಿ ರೂಪಾಲಿ ಎಸ್.ನಾಯ್ಕ ಜನ್ಮ ದಿನಕ್ಕೆ ನಿಕಟಪೂರ್ವ ಮುಖ್ಯಮಂತ್ರಿ, ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೋವಾ ಸಿಎಂ ಪ್ರಮೋದ ಸಾವಂತ, ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಚಿವರುಗಳು, ಶಾಸಕರುಗಳು, ಕಾರ್ಯಕರ್ತರು, ಪಕ್ಷದ ಪ್ರಮುಖರು, ಅಭಿಮಾನಿಗಳು ದೂರವಾಣಿ ಮೂಲಕ ಶುಭಾಶಯಗಳನ್ನು ಸಲ್ಲಿಸಿದ್ದಾರೆ.
ನನ್ನ ಜನ್ಮದಿನವನ್ನು ಕ್ಷೇತ್ರದ ಜನತೆ, ಗಣ್ಯರು ತಮ್ಮ ಮನೆ ಮಗಳ ಜನ್ಮದಿನದಂತೆ ಆಚರಿಸಿದ್ದು ನನಗೆ ಹೃದಯತುಂಬಿ ಬಂದಿದೆ. ಪಕ್ಷದ ನಾಯಕರು, ಪ್ರಮುಖರು, ಕಾರ್ಯಕರ್ತರು, ಕಾರವಾರ ನಗರ, ಗ್ರಾಮೀಣ ಮಂಡಲ, ಅಂಕೋಲಾ ಮಂಡಲ, ವಿವಿಧ ಮೋರ್ಚಾ, ಪ್ರಕೋಷ್ಠಗಳ ಪದಾಧಿಕಾರಿಗಳು, ಸದಸ್ಯರು ಶುಭಾಶಯಗಳನ್ನು ಸಲ್ಲಿಸಿದ್ದಾರೆ. ಅವರೆಲ್ಲರಿಗೆ ಕೃತಜ್ಞನಾಗಿದ್ದೇನೆ. ಚಿರಋಣಿಯಾಗಿದ್ದೇನೆ. ಎಲ್ಲರ ಆಶೀರ್ವಾದವೇ ನನಗೆ ಶ್ರೀರಕ್ಷೆಯಾಗಿದೆ.
– ರೂಪಾಲಿ ಎಸ್.ನಾಯ್ಕ, ಶಾಸಕರು, ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರ