ಕಾರವಾರ: ಪಿಂಚಣಿಗಾಗಿ ಆರಂಭಿಸಲಾಗಿರುವ ‘ಹಲೋ ಕಂದಾಯ ಸಚಿವರೇ’ ಎಂಬ ಕಾರ್ಯಕ್ರಮದಡಿಯ 1000 ನೇ ಫಲಾನುಭವಿಯ ಮನೆಗೆ ತೆರಳಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಪಿಂಚಣಿ ಪತ್ರವನ್ನು ಗುರುವಾರ ನೀಡಿದ್ದಾರೆ.
ಏಪ್ರಿಲ್ 15 ರಂದು ಅಂಕೋಲಾ ತಾಲೂಕಿನ ಅಚವೆ ಗ್ರಾಮದಲ್ಲಿ ನಡೆದ ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ
ಕಂದಾಯ ಸಚಿವ ಆರ್. ಅಶೋಕ ‘ಹಲೋ ಕಂದಾಯ ಸಚಿವರೇ’ ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸುವುದಾಗಿ ಘೋಷಣೆ ಮಾಡಿದ್ದರು. ಬಳಿಕ ಮೇ 11 ರಂದು ಆದೇಶ ಹೊರಡಿಸಿ ಟೋಲ್ ಫ್ರೀ ದೂರವಾಣಿ ಸಂಖ್ಯೆ155245 ಗೆ ಕರೆಮಾಡಿ ಆಧಾರ್ ಸಂಖ್ಯೆ ನೀಡಿದ್ದಲ್ಲಿ , ಅರ್ಹ ಫಲಾನುಭವಿಗಳಿಗೆ 72 ಗಂಟೆಗಳೊಳಗಾಗಿ ಪಿಂಚಣಿ ಸೌಲಭ್ಯ & ಆದೇಶದ ಪ್ರತಿಯನ್ನು ಮನೆಬಾಗಿಲಿಗೆ ತಲುಪಿಸುವ ಯೋಜನೆಯನ್ನು ಜಾರಿ ಮಾಡಲಾಗಿತ್ತು. ಈ ಯೋಜನೆಯು ಉತ್ತರ ಕನ್ನಡ ಜಿಲ್ಲೆಯಲ್ಲಿ ಮೇ 13 ರಂದು ಕಾರವಾರ ತಾಲೂಕಿನಿಂದ ಪ್ರಾರಂಭವಾಗಿದ್ದು, ಜಿಲ್ಲೆಯ ನಾಗರಿಕರ ಪ್ರೋತ್ಸಾಹ ಹಾಗೂ ಸ್ಪಂದನೆಯಿಂದ ಇದುವರೆಗೆ 1000 ಫಲಾನುಭವಿಗಳು ಈ ಯೋಜನೆಯ ಪ್ರಯೋಜನ ಪಡೆದಿದ್ದಾರೆ.
ಅದರಂತೆ 1000 ನೇ ಫಲಾನುಭವಿಯಾದ ಕಾರವಾರ ತಾಲೂಕಿನ ಚೆಂಡಿಯಾದ ಮಧುಕರ ತುವಾ ನಾಯ್ಕ ಮನೆ ಬಾಗಿಲಿಗೆ ಹೋಗಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಪಿಂಚಣಿ ಆದೇಶವನ್ನು ನೀಡಿದ್ದಾರೆ. ಫಲಾನುಭವಿಗೆ 71 ವರ್ಷ ವಯಸ್ಸಾಗಿದ್ದು, ಸಂಧ್ಯಾ ಸುರಕ್ಷಾ ಯೋಜನೆಯಡಿ ರೂ. 1200 ಮಾಸಾಶನ ಮಂಜೂರಿಯಾಗಿದೆ. ಈ ಸಂದರ್ಭದಲ್ಲಿ ತಹಶೀಲ್ದಾರ ವಿಶ್ಚಲ್ ನರೋನ್ಹಾ, ಗ್ರೇಡ್ 2 ತಹಶೀಲ್ದಾರ್ ಶ್ರೀದೇವಿ ಭಟ್, ಅಧಿಕಾರಿಗಳಾದ ಪ್ರಶಾಂತ್ ಎಸ್. ಹೆಚ್, ಬಸವರಾಜ ಭಜಂತ್ರಿ ಮತ್ತು ವಿ. ಕೆ. ನಾಯ್ಕ ಇದ್ದರು.