ನಾಡು ಕಂಡ ಅಪರೂಪದ ಸರಳ, ಸಜ್ಜನ ವ್ಯಕ್ತಿತ್ವದ ಜನಾನುರಾಗಿ ರಾಜಕಾರಣಿ ಶ್ರೀಮತಿ ರೂಪಾಲಿ ನಾಯ್ಕ್. ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಿಯಿಲ್ಲದೇ ಕ್ಷೇತ್ರದ ಜನತೆಯ ಪರವಾಗಿ ಸದಾ ಮಿಡಿಯುವ ಹೆಮ್ಮೆಯ ಶಾಸಕರು. ಸಾಮಾನ್ಯ ಕಾರ್ಯಕರ್ತೆಯಾಗಿ ಪಕ್ಷಕ್ಕೆ ದುಡಿದು ಪ್ರಸ್ತುತ ಪ್ರಭಾವಿ ರಾಜಕಾರಣಿಯಾಗಿ ಗುರುತಿಸಿಕೊಂಡವರು. ಜನರ ಸಂಕಷ್ಟಕ್ಕೆ ಸೂಕ್ತವಾಗಿ ಸ್ಪಂದಿಸುವ ಕ್ಷೇತ್ರದ ಜನರ ಜೊತೆ ಬೆರೆಯುವ ಹೆಮ್ಮೆಯ ಶಾಸಕಿ ‘ರೂಪಾಲಿ ನಾಯ್ಕ್’ ಅವರಿಗೆ ಇಂದು ಜನುಮದಿನದ ಸಂಭ್ರಮ. ಈ ಸಂದರ್ಭದಲ್ಲಿ ಶಾಸಕರು ನಡೆದು ಬಂದ ದಾರಿ, ಕ್ಷೇತ್ರದ ಅಭಿವೃದ್ಧಿ, ಹಾಗೂ ಅವರ ಸಾಧನೆಯ ಹಾದಿಯ ಕುರಿತು ಒಂದು ನೋಟ.
ಶಾಸಕಿ ರೂಪಾಲಿ ನಾಯ್ಕ್ ಅವರ ಸಾಧನೆಯ ಹಾದಿ
ಅದು 2005ರ ಸಮಯ. ಕಾರವಾರ ತಾಲೂಕಿನ ಚೆಂಡಿಯಾ ಗ್ರಾಮ ಪಂಚಾಯತ್ ಗೆ ರೂಪಾಲಿ ನಾಯ್ಕ ಸ್ಪರ್ಧಿಸುತ್ತಾರೆ. ಗೆದ್ದು ಜನಸೇವೆಯಲ್ಲಿ ತೊಡಗಿಕೊಂಡಾಗ ಮರು ವರ್ಷವೇ ತಾಲೂಕಾ ಪಂಚಾಯತ್ ಚುನಾವಣೆ ಎದುರಾಗುತ್ತದೆ. ಆಗ ತಾಪಂಗೂ ಸ್ಪರ್ಧಿಸಿ ಗೆದ್ದು ಬರುತ್ತಾರೆ. ಅಷ್ಟೇ ಅಲ್ಲ, ಅಧ್ಯಕ್ಷರೂ ಆಗುತ್ತಾರೆ. ಜನರ ನಾಡಿಮಿಡಿತ ಅರಿತು ಸಾಧಿಸಿದ ಅಭಿವೃದ್ಧಿ, ಸಾಧನೆಗಾಗಿ 2008 ರಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿಯನ್ನೂ ಪಡೆಯುತ್ತಾರೆ.
ರಾಜ್ಯ ಮಹಿಳಾ ಮೋರ್ಚಾದ ಕಾರ್ಯಕಾರಿಣಿ ಮಂಡಳಿ ಸದಸ್ಯರಾಗಿ ನೇಮಕಗೊಳ್ಳುತ್ತಾರೆ. 2018 ರಲ್ಲಿ ಕಾರವಾರ ಅಂಕೋಲಾ ವಿಧಾನಸಭೆ ಕ್ಷೇತ್ರಕ್ಕೆ ಟಿಕೆಟ್ ನೀಡಿದಾಗ ಅಭೂತಪೂರ್ವ ಗೆಲುವು ಸಾಧಿಸುತ್ತಾರೆ.
ನಂತರ ನಡೆದ ಲೋಕಸಭೆ, ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಕ್ಷೇತ್ರದಿಂದ ಭಾರಿ ಲೀಡ್ ದೊರಕಿಸಿಕೊಡುವಲ್ಲಿ ಇವರ ಪಾತ್ರ ದೊಡ್ಡದು. ಕಾರವಾರ ನಗರಸಭೆ ಹಾಗೂ ಅಂಕೋಲಾ ಪುರಸಭೆಯಲ್ಲಿ ಪಕ್ಷಕ್ಕೆ ಬಹುಮತ ಇಲ್ಲದಿದ್ದರೂ ಚಾಣಾಕ್ಷತನದಿಂದ ಆಡಳಿತವನ್ನು ಬಿಜೆಪಿಗೆ ಮಡಿಲಿಗೆ ತಂದುಕೊಟ್ಟರು.
ಜಿಲ್ಲೆಯಲ್ಲಿ ಶಾಸಕರ ಅಭೂತಪೂರ್ವ ಸಾಧನೆ
ಡಿ.22 ರಂದು ನಡೆದ ಗ್ರಾಪಂ ಚುನಾವಣೆಯಲ್ಲಿ ಕ್ಷೇತ್ರದ ಪ್ರತಿ ಗ್ರಾಮ ಪಂಚಾಯತ್ ಮಟ್ಟಕ್ಕೂ ತೆರಳಿ ಕಾರ್ಯಕರ್ತರಲ್ಲಿ ಹುಮ್ಮಸ್ಸು, ಆತ್ಮವಿಶ್ವಾಸ ಮೂಡಿಸಿದರು. ಫಲಿತಾಂಶ ಬಂದಾಗ ಬಿಜೆಪಿ ಬೆಂಬಲಿತರು ಅಭೂತಪೂರ್ವವಾಗಿ ಜಯಗಳಿಸಿದರು. ಕಾರವಾರ ತಾಲೂಕಿನಲ್ಲಿ ಒಂದೇ ಒಂದು ಗ್ರಾಪಂನಲ್ಲೂ ಬಿಜೆಪಿ ಬೆಂಬಲಿತರ ಆಡಳಿತ ಇರಲಿಲ್ಲ. ಇದೇ ಮೊದಲ ಬಾರಿಗೆ ಕಾರವಾರ ತಾಲೂಕಿನಲ್ಲಿ 14 ರಷ್ಟು ಗ್ರಾಪಂನಲ್ಲಿ ಬಿಜೆಪಿ ಬೆಂಬಲಿತರು ಹಾಗೂ ಅಂಕೋಲಾ ತಾಲೂಕಿನಲ್ಲೂ 14 ರಷ್ಟು ಗ್ರಾಪಂಗಳಲ್ಲಿ ಬಿಜೆಪಿ ಅಧಿಕಾರಕ್ಕೇರಿದೆ.
ವಿಧಾನ ಪರಿಷತ್ ಚುನಾವಣೆಗೆ ಗಣಪತಿ ಉಳ್ವೇಕರ್ ಸ್ಪರ್ಧಿಸಿದಾಗ ಅವರ ಗೆಲುವಿಗೆ ನಿರಂತರವಾಗಿ ಓಡಾಡಿದರು. ಕ್ಷೇತ್ರದಲ್ಲಿ ಅತಿ ಹೆಚ್ಚು ಮತಗಳು ದೊರೆಯುವಲ್ಲಿ ರೂಪಾಲಿ ನಾಯ್ಕ ಅವರ ಶ್ರಮ ಸಾಕಷ್ಟಿದೆ.
ಕ್ಷೇತ್ರದಲ್ಲಿ ಪಕ್ಷದ ಈ ಐತಿಹಾಸಿಕ ಸಾಧನೆಯ ಹಿಂದೆ ಶಾಸಕರಾದ ಶ್ರೀಮತಿ ರೂಪಾಲಿ ನಾಯ್ಕ ಅವರ ಶ್ರಮ ಅಪಾರವಾಗಿದೆ. ಹಾಗಿದ್ದರೂ ಅವರು ತಮ್ಮೊಬ್ಬರಿಂದ ಎಲ್ಲವೂ ಆಗಿಲ್ಲ. ಪ್ರಧಾನಿ ಶ್ರೀ ನರೇಂದ್ರ ಮೋದಿಜಿ ಅವರ ಪ್ರಗತಿ, ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಭಿವೃದ್ಧಿ, ಪಕ್ಷದ ಕಾರ್ಯಕರ್ತರು, ಮುಖಂಡರು, ಪದಾಧಿಕಾರಿಗಳು ಹೀಗೆ ಸಂಘಟಿತ ಹೋರಾಟದಿಂದ ಭರ್ಜರಿ ಯಶಸ್ಸು ದೊರಕಿದೆ ಎಂದು ವಿನಮ್ರವಾಗಿ ಹೇಳುತ್ತಾರೆ.
ಕಾರವಾರ ಅಂಕೋಲಾ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಂತ ಶಾಸಕರು
ಕಾರವಾರ ಹಾಗೂ ಅಂಕೋಲಾ ತಾಲೂಕಿನ ಬಿಜೆಪಿ ಹಾಗೂ ಅಭಿವೃದ್ಧಿಯಲ್ಲಿ ಶ್ರೀಮತಿ ರೂಪಾಲಿ ಎಸ್.ನಾಯ್ಕ ಹೊಸ ಅಲೆಯನ್ನು ಸೃಷ್ಟಿಸಿದ್ದಾರೆ. ಕಾರವಾರ ಅಂಕೋಲಾ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿಗೆ ಭದ್ರ ಬುನಾದಿ ಹಾಕಿಕೊಟ್ಟ ಅವರು ಸಾಮಾಜಿಕ ಅಭಿವೃದ್ಧಿ, ಪಕ್ಷದ ಬೆಳವಣಿಗೆ ಹೀಗೆ ಏಕಕಾಲಕ್ಕೆ ದಣಿವರಿಯದೆ ದುಡಿಯುತ್ತಿದ್ದಾರೆ. ನಾಯಕತ್ವದ ಎಲ್ಲ ಗುಣಗಳೂ ಮೇಳೈಸಿರುವ ಅವರಲ್ಲಿ ಪಕ್ಷ ನೀಡುವ ಯಾವುದೆ ಜವಾಬ್ದಾರಿಯನ್ನೂ ನಿರ್ವಹಿಸುವ ಅರ್ಹತೆ ಇದೆ. ಸಾಮರ್ಥ್ಯವೂ ಇದೆ.
ಪಕ್ಷ ಸಂಘಟನೆಯಲ್ಲಿ ಮುಂಚೂಣಿ
ಶ್ರೀಮತಿ ರೂಪಾಲಿ ಎಸ್.ನಾಯ್ಕ ಶಾಸಕರಾದ ನಂತರ ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರ ಹಿಂದೆಂದೂ ಕಾಣದ ರೀತಿಯಲ್ಲಿ ಅಭಿವೃದ್ಧಿಗೊಂಡಿದೆ. ಏಕ ಕಾಲಕ್ಕೆ ಅಭಿವೃದ್ಧಿ ಹಾಗೂ ಪಕ್ಷ ಸಂಘಟನೆ ಮಾಡುವ ಮೂಲಕ ರೂಪಾಲಿ ಎಸ್.ನಾಯ್ಕ ಕ್ಷೇತ್ರದ ಜನತೆ ಹಾಗೂ ಭಾರತೀಯ ಜನತಾಪಕ್ಷಕ್ಕೆ ಆಧಾರಸ್ತಂಭವಾಗಿ ಹೊರಹೊಮ್ಮಿದ್ದಾರೆ.
ಶಾಸಕರಾದ ನಂತರ ರೂಪಾಲಿ ಎಸ್.ನಾಯ್ಕ ಅವರ ಅಭಿವೃದ್ಧಿ ಕಾಮಗಾರಿಗಳ ವಿವರ ಇಲ್ಲಿದೆ.
5 ಕೋಟಿ ರು.ಗಳಲ್ಲಿ ಮಾಲಾದೇವಿ ಮೈದಾನ ಅಭಿವೃದ್ಧಿ
ಕಾರವಾರದ ಮಾಲಾದೇವಿ ಮೈದಾನದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಬೇಕು ಎನ್ನುವುದು ಹಲವು ವರ್ಷದ ಬೇಡಿಕೆಯಾಗಿತ್ತು. ಅದನ್ನು ಈಡೇರಿಸಲು ಮುಂದಾದವರು ಶ್ರೀಮತಿ ರೂಪಾಲಿ ಎಸ್.ನಾಯ್ಕ. ಇತಿಹಾಸದಲ್ಲಿ ಮೊದಲ ಬಾರಿಗೆ ಕ್ರೀಡೆಗಳಿಗೆ ಅನುಕೂಲವಾಗುವಂತೆ 5 ಕೋಟಿ ರು. ವೆಚ್ಚದಲ್ಲಿ ಅಗತ್ಯ ಟ್ರ್ಯಾಕ್, ಗ್ಯಾಲರಿ, ಒಳಾಂಗಣ ಕ್ರೀಡಾಂಗಣ, ವಿಶ್ರಾಂತಿ ಕೊಠಡಿ, ಶೌಚಾಲಯ, ಆವರಣ ಗೋಡೆ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳು ಬರಲಿವೆ. ಕ್ರೀಡಾಪಟುಗಳಿಗೆ, ಸಾರ್ವಜನಿಕರಿಗೆ ಅನುಕೂಲವಾಗಲಿದೆ.
ಡೋಂಗ್ರಿ ಶಾಶ್ವತ ಸೇತುವೆ
2019ರಲ್ಲಿ ಪ್ರವಾಹ ಸಂಭವಿಸಿದಾಗ ತೂಗು ಸೇತುವೆ ಕೊಚ್ಚಿ ಹೋಯಿತು. ದೂರದ ಮಾರ್ಗದಿಂದ ಇದರಿಂದ ಜನರ ಸಂಪರ್ಕವೂ ಇಲ್ಲದೆ ಜನರು ಸಂಕಷ್ಟ ಎದುರಿಸುತ್ತಿದ್ದರು. ಅಂದಿನ ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪ ಹಾಗೂ ಲೋಕೋಪಯೋಗಿ ಸಚಿವರಾದ ಶ್ರೀ ಗೋವಿಂದ ಕಾರಜೋಳ ಅವರಲ್ಲಿ ಮನವಿ ಮಾಡಿ ಸುಮಾರು 25 ಕೋಟಿ ರೂ. ವೆಚ್ಚದಲ್ಲಿ ಶಾಶ್ವತ ಸೇತುವೆ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ಉಂಬಳೆ ಜೂಗ್ ಹಾಗೂ ಕಡವಾಡ ಸುಂಕೇರಿ ಸೇತುವೆ
ತಲಾ 10 ಕೋಟಿ ರು. ವೆಚ್ಚದಲ್ಲಿ ಜನರಿಗೆ ಅತಿ ಅವಶ್ಯಕವಾಗಿದ್ದ ಕಡವಾಡ ಸುಂಕೇರಿ ಮತ್ತು ವೈಲವಾಡ ಗ್ರಾಮದ ದ್ವೀಪಕ್ಕೆ ಸಂಪರ್ಕ ಕಲ್ಪಿಸುತ್ತಿದ್ದ ಉಂಬಳೆಜೂಗ ಸೇತುವೆಗೆ ಅನುದಾನವನ್ನು ಒದಗಿಸಿದ್ದಾರೆ. ಸೇತುವೆ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.
ಅಂಕೋಲಾ ನಗರದ ರಸ್ತೆ
ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮತ್ತು ಹಿಂದೆಂದೂ ಯಾರೂ ಮಾಡಿರದ ಅಂಕೋಲಾ ಮುಖ್ಯರಸ್ತೆಯನ್ನು ಸುಸಜ್ಜಿತವಾಗಿರಬೇಕು ಹಾಗೂ ಸೌಂದರ್ಯವಾಗಿ ನಿರ್ಮಿಸಲು ಸುಮಾರು 8.50 ಕೋಟಿ ರೂ. ವೆಚ್ಚದಲ್ಲಿ ಮುಂದಡಿ ಇಟ್ಟಿದ್ದಾರೆ. ರಸ್ತೆ ನಿರ್ಮಾಣ ನಡೆಯುತ್ತಿದೆ.
ಅನ್ನದಾತರಿಗೆ ಪ್ರೋತ್ಸಾಹ
ಕೃಷಿ ಚಟುವಟಿಕೆಯಲ್ಲಿ ಯುವಕರಿಗೆ ಪ್ರೋತ್ಸಾಹ ನೀಡುವುದು ಮತ್ತು ತಂತ್ರಜ್ಞಾನ ಬಳಸಿ ಕಾರವಾರ ಮತ್ತು ಅಂಕೋಲಾ ತಾಲ್ಲೂಕಿನಲ್ಲಿ ರೈತರಿಂದ ಜಮೀನನ್ನು ಪಡೆದು ಸ್ವತಃ ಟ್ರ್ಯಾಕ್ಟರ್ ನಲ್ಲಿ ಭೂಮಿ ಉಳುಮೆ ಮಾಡಿದ್ದಾರೆ. ಬತ್ತ ಬೆಳೆದು ಮಾದರಿಯಾಗಿದ್ದಾರೆ. ಕೃಷಿಯಲ್ಲೂ ಯಶಸ್ಸು ಕಂಡುಕೊಂಡಿದ್ದಾರೆ.
ಕೂರ್ಮಗಡ ದುರಂತ
2019ರಲ್ಲಿ ಅರಬ್ಬಿ ಸಮುದ್ರದಲ್ಲಿನ ಕೂರ್ಮಗಡ ದ್ವೀಪದ ನರಸಿಂಹ ದೇವರ ಜಾತ್ರೆಯಂದು ಬೋಟ್ ಮುಳುಗಿ ನಡೆದ ದುರಂತದಲ್ಲಿ ನೀರು ಪಾಲಾಗುತ್ತಿದ್ದವರನ್ನು ಶಾಸಕರು ಸ್ವತಃ ಸಂಗಡಿಗರ ಸಹಾಯದಿಂದ ರಕ್ಷಿಸಿದರು. ಅವರ ಕುಟುಂಬದವರಿಗೆ ಸಾಂತ್ವನ ಹೇಳಿದರು. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸಿದರು. ಹೀಗೆ ಯಾವುದೆ ಸಮಸ್ಯೆ ಇರಲಿ, ಅವಘಡ ಇರಲಿ ಶಾಸಕಿ ರೂಪಾಲಿ ನಾಯ್ಕ ಧೈರ್ಯದಿಂದ ಎದುರಿಸುತ್ತಾರೆ. ಜನರಿಗೆ ನ್ಯಾಯ ದೊರಕಿಸಿಕೊಡುತ್ತಾರೆ.
ಕೊರೋನಾ ಸಮಯದಲ್ಲಿ ಜನತೆಯ ಜೊತೆ ನಿಂತ ಶಾಸಕರು
ಕೊರೋನಾ ವಿಶ್ವವನ್ನೇ ತಲ್ಲಣಗೊಳಿಸಿತು. ಹಾಗೆಯೇ ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲೂ ಸಾಕಷ್ಟು ಜನರು ಪ್ರಾಣ ಕಳೆದುಕೊಂಡರು. ಆರೋಗ್ಯ ಸಮಸ್ಯೆಗೊಳಗಾದರು. ಲಾಕ್ ಡೌನ್ ನಿಂದ ಜನತೆ ಕಂಗೆಟ್ಟಾಗ ಸುಮಾರು 25ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ದಿನಸಿ ಹಾಗೂ ದಿನಬಳಕೆ ವಸ್ತುಗಳ ಕಿಟ್ ಗಳನ್ನು ವಿತರಿಸಿ ಮಾನವೀಯತೆ ಮೆರೆಯಲಾಗಿದೆ.
ಶಾಸಕರ ನಿಧಿಯಲ್ಲಿ ನಾಲ್ಕು ಅತ್ಯಾಧುನಿಕ ಅಂಬ್ಯುಲೆನ್ಸ್
ಕಾರವಾರದಲ್ಲಿರುವ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ದಾಖಲಾದ ಕೊರೋನಾ ಸೋಂಕಿತರ ಚಿಕಿತ್ಸೆಗೆ ಬೇರೆ ಬೇರೆ ಕಡೆಗಳಿಂದ ಆಕ್ಸಿಜನ್ ತರಬೇಕಿತ್ತು. ಸರ್ಕಾರಕ್ಕೆ ಮನವಿ ಮಾಡಿ ಕಾರವಾರದಲ್ಲೇ ಆಕ್ಸಿಜನ್ ಪ್ಲಾಂಟ್ ಆಗುವಂತಾಗಿದೆ. ಇದರಿಂದ ಆಕ್ಸಿಜನ್ ಗಾಗಿ ಪರದಾಟ, ಅವಲಂಬನೆ ತಪ್ಪಿ ಸೋಂಕಿತರ ಚಿಕಿತ್ಸೆಗೆ ತುಂಬಾ ಅನುಕೂಲ ಉಂಟಾಯಿತು.
ಪ್ರವಾಹದ ಸಮಯದಲ್ಲಿ ಜನರ ಸಂಕಷ್ಟಕ್ಕೆ ಸ್ಪಂದಿಸಿದ ರೂಪಾಲಿ ನಾಯ್ಕ್
ಕಾರವಾರದಲ್ಲಿ ಕಾಳಿ ನದಿ, ಅಂಕೋಲಾದಲ್ಲಿ ಗಂಗಾವಳಿ ನದಿಗೆ ಬಂದ ಭಾರಿ ಪ್ರವಾಹದಿಂದ ಸಾವಿರ ಸಾವಿರ ಸಂಖ್ಯೆಯಲ್ಲಿ ಜನರು ನಿರಾಶ್ರಿತರಾದರು. ಮನೆ, ಜಾನುವಾರುಗಳನ್ನು ಕಳೆದುಕೊಂಡರು. ಬೆಳೆ ಹಾನಿ ಉಂಟಾಯಿತು. ಜನರು ದಿಕ್ಕೆಟ್ಟು ಕುಳಿತಿರುವಾಗ 30 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ದಿನಸಿ ಸಾಮಗ್ರಿ, ದೈನಂದಿನ ಬಳಕೆಯ ವಸ್ತುಗಳ ಕಿಟ್ ವಿತರಿಸಲಾಯಿತು.
ಅಂಬ್ಯುಲೆನ್ಸ್ ನೀಡಿಕೆ
ಕೋವಿಡ್ 19ನಿಂದ ಎಲ್ಲೆಡೆ ರೋಗಿಗಳನ್ನು ಕರೆದೊಯ್ಯಲು ಸಮಸ್ಯೆ ಉಂಟಾಯಿತು. ಇದನ್ನು ಮನಗಂಡ ರೂಪಾಲಿ ನಾಯ್ಕ, ಕಾರವಾರ ಅಂಕೋಲಾ ಕ್ಷೇತ್ರದಲ್ಲಿ ಇಂತಹ ಸಮಸ್ಯೆ ಉಂಟಾಗಬಾರದು ಎಂದು ಕಾರವಾರ ಹಾಗೂ ಅಂಕೋಲಾಕ್ಕೆ ತಲಾ ಎರಡು ಸುಸಜ್ಜಿತ ಅಂಬ್ಯುಲೆನ್ಸ್ ಗಳನ್ನು ತಮ್ಮ ಶಾಸಕರ ಅನುದಾನದಲ್ಲಿ ನೀಡಿದರು. ಇದರಲ್ಲಿ ಎರಡು ವೆಂಟಿಲೇಟರ್ ಇರುವ ಅಂಬ್ಯುಲೆನ್ಸ್ ಆದರೆ ಎರಡು ಆಮ್ಲಜನಕ ಇರುವ ಅಂಬ್ಯುಲೆನ್ಸ್ ಆಗಿದೆ.
ಆಮ್ಲಜನಕ ಘಟಕ
ಕೋವಿಡ್ 19 ಸೋಂಕಿನಿಂದ ಜನತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ಆಮ್ಲಜನಕ ಸ್ಥಾವರ ಇರಲಿಲ್ಲ, ಬಳ್ಳಾರಿ, ಕುಮಟಾ, ಗೋವಾದಿಂದ ಆಮ್ಲಜನಕವನ್ನು ತರಬೇಕಿತ್ತು. ಇದನ್ನು ಪರಿಗಣಿಸಿ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಿಸುವಂತೆ ಅಂದಿನ ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪ ಮತ್ತು ಆರೋಗ್ಯ ಸಚಿವ ಡಾ ಸುಧಾಕರ ಅವರಿಗೆ ಮನವಿ ಮಾಡಿದ ಪರಿಣಾಮವಾಗಿ ಕಾರವಾರದಲ್ಲಿ ಆಮ್ಲಜನಕ ಘಟಕ ನಿರ್ಮಾಣವಾಗಿದೆ.
ಶೃದ್ಧಾಂಜಲಿ ವಾಹನ
ಕೋವಿಡ್ 19 ಸಂದರ್ಭದಲ್ಲಿ ಸೂಕ್ತ ಚಿಕಿತ್ಸೆ ನೀಡಿಯೂ ಅಸುನೀಗಿದವರ ದೇಹ ಸಾಗಿಸಲು ಕಾರವಾರ ಹಾಗೂ ಅಂಕೋಲಾ ತಾಲೂಕಿಗೆ ತಲಾ ಒಂದರಂತೆ ವೈಯಕ್ತಿಕವಾಗಿ ಶೃದ್ಧಾಂಜಲಿ ವಾಹನವನ್ನು ನೀಡಿದ್ದಾರೆ. ಮೃತದೇಹ ಒಯ್ಯಲು ಜನತೆ ಅನುಭವಿಸುತ್ತಿದ್ದ ಬವಣೆಯನ್ನು ತಪ್ಪಿಸಿದ್ದಾರೆ.
ವಿಜಯ ದಿವಸ್, ಶಿವಾಜಿ ಜಯಂತಿ
ದೇಶಭಕ್ತಿಯ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಹಾಗೂ ದೇಶಪ್ರೇಮದ ಕಾರ್ಯಕ್ರಮ ಹಮ್ಮಿಕೊಳ್ಳುವಲ್ಲಿ ರೂಪಾಲಿ ನಾಯ್ಕ ಮುಂಚೂಣಿಯಲ್ಲಿದ್ದಾರೆ. ಕಡವಾಡ ಸಮೀಪದ ನಂದವಾಳದಲ್ಲಿ ಸೋಂದಾ ಅರಸರು ಬ್ರಿಟೀಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ನೆನಪಿಗಾಗಿ ರೂಪಾಲಿ ಎಸ್.ನಾಯ್ಕ ಪ್ರತಿ ವರ್ಷ ವಿಜಯ ದಿವಸ ಆಚರಣೆಯನ್ನು ಆರಂಭಿಸಿದರು. ಅಂದು ಭಗವಾಧ್ವಜ ಹಾರಿಸಿ ದೇಶಭಕ್ತಿಯ ಸಂದೇಶ ನೀಡಲಾಗುತ್ತದೆ.
ದೇಶಭಕ್ತ, ಹಿಂದು ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಅಂಕೋಲಾದಲ್ಲಿ ಅದ್ಧೂರಿಯಿಂದ ಆಚರಿಸಲು ಆರಂಭಿಸಿದರು.
ಉದ್ಯೋಗ ಮೇಳ
ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಯುವಜನತೆ ಉದ್ಯೋಗಕ್ಕಾಗಿ ಗೋವಾ, ಮುಂಬಯಿ ಹೀಗೆ ಮತ್ತಿತರ ಕಡೆ ಪರದಾಡುವುದನ್ನು ನೋಡಿ 2019ರಲ್ಲಿ ಕಾರವಾರದಲ್ಲಿ ಮೆಗಾ ಉದ್ಯೋಗ ಮೇಳ ಸಂಘಟಿಸಿದರು. ಪ್ರಮುಖ ಕಂಪನಿಗಳು, ಉದ್ಯಮಿಗಳು ಆಗಮಿಸಿದ್ದರು. ಇದರಲ್ಲಿ ಸುಮಾರು 5000ದಷ್ಟು ಯುವಕರು ಭಾಗವಹಿಸಿದರು. ಇವರಲ್ಲಿ 1 ಸಾವಿರದಷ್ಟು ಯುವಕ, ಯುವತಿಯರಿಗೆ ಉದ್ಯೋಗ ಲಭ್ಯವಾಯಿತು. ಇದೊಂದು ಭಾರಿ ಯಶಸ್ಸು ಕಂಡಿತು.
ಕ್ರೀಡೆಗೆ ಪ್ರೋತ್ಸಾಹ
ಹಳ್ಳಿ ಹಳ್ಳಿಗಳಲ್ಲಿ ನಡೆಯುವ ವಾಲಿಬಾಲ್, ಕ್ರಿಕೆಟ್ ಮತ್ತಿತರ ಕ್ರೀಡೆಗೆ ರೂಪಾಲಿ ಎಸ್.ನಾಯ್ಕ ನಿರಂತರವಾಗಿ ಪ್ರೋತ್ಸಾಹ ನೀಡುತ್ತಿದ್ದಾರೆ. ಇದರ ಜತೆಗೆ ಅಂಕೋಲಾದಲ್ಲಿ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿ ಸಂಘಟಿಸಿದ್ದಾರೆ. ಕ್ರಿಕೆಟ್ ಪಂದ್ಯಾವಳಿಯನ್ನೂ ನಡೆಸಿದ್ದಾರೆ.
ಇದರ ಜತೆಗೆ ರಾಜ್ಯಮಟ್ಟದ ಸಾಂಸ್ಕೃತಿಕ, ಕಲಾ ಉತ್ಸವನ್ನೂ ಸಂಘಟಿಸಿ ಕಲಾವಿದರಿಗೆ ಉತ್ತೇಜನ ನೀಡಿ, ಜನತೆಗೆ ಕಲಾಸ್ವಾದನೆಗೆ ಅನುಕೂಲ ಮಾಡಿಕೊಟ್ಟಿದ್ದಾರೆ.
ಮಾಜಾಳಿ ದಂಡೆ ಬಾಗದಲ್ಲಿ ಮೀನುಗಾರಿಕಾ ಬಂದರು
ಮೀನುಗಾರಿಕೆಗೆ ಸಮೃದ್ಧವಾಗಿದ್ದ ಕಡಲತೀರಗಳು ಸೀಬರ್ಡ ನೌಕಾನೆಲೆಗೆ ಹೋಗಿದ್ದರಿಂದ ಮೀನುಗಾರಿಕೆಗೆ ಮತ್ತೊಂದು ಬಂದರು ಅವಶ್ಯಕತೆಯನ್ನು ಮನಗಂಡ ಶಾಸಕರು ಮಾಜಾಳಿ ದಂಡೆಬಾಗದಲ್ಲಿ ನೂತನ ಮೀನುಗಾರಿಕೆ ಬಂದರು ನಿರ್ಮಾಣಕ್ಕೆ ಸರ್ಕಾರವನ್ನು ಆಗ್ರಹಿಸಿದ ಪರಿಣಾಮವಾಗಿ ಬಜೆಟ್ ನಲ್ಲಿ ಮೀನುಗಾರಿಕೆ ಬಂದರನ್ನು ಘೋಷಿಸಲಾಗಿದೆ.
ಅಶ್ವತ್ಥಧಾಮ ಅಭಿವೃದ್ಧಿ
ಅಂಕೋಲಾ ತಾಲೂಕಿನ ಮೋತಿಗುಡ್ಡ ಯಕ್ಷಋಷಿ ದಿ.ಹೊಸ್ತೋಟ ಮಂಜುನಾಥ ಭಾಗವತರು ನೆಲೆಸಿದ್ದ ತಾಣ. ಅಲ್ಲಿ ಸ್ವಂತ ವೆಚ್ಚದಲ್ಲಿ ಹೊಸ್ತೋಟ ಭಾಗವತರ ಪ್ರತಿಮೆ, ಅಶ್ವತ್ಥ ಕಟ್ಟೆ, ಶೆಡ್ ನಿರ್ಮಿಸಿ, ಭಾಗವತರು ವಾಸಿಸುತ್ತಿದ್ದ ಕುಟೀರವನ್ನು ಸುಸ್ಥಿತಿಗೆ ತಂದು ಅಶ್ವತ್ಥಧಾಮವನ್ನು ಅಭಿವೃದ್ಧಿ ಪಡಿಸಿದ್ದಾರೆ.
ಮೀನುಗಾರರ ನೆರವಿಗೆ ನಿಂತ ಶಾಸಕರು
ಕೊರೋನಾ ಲಾಕ್ ಡೌನ್ ಅವಧಿಯಲ್ಲಿ ಕ್ಷೇತ್ರದ ಜನತೆ ಹಸಿವಿನಿಂದ ಬಳಲದಂತೆ ನೋಡಿಕೊಂಡಿದ್ದಷ್ಟೇ ಅಲ್ಲ, ಸಾಂಪ್ರದಾಯಿಕ ಮೀನುಗಾರಿಕೆ ಆರಂಭಕ್ಕೆ ಕಾರಣರಾಗುವ ಮೂಲಕ ಮೀನುಗಾರರ ನೆರವಿಗೆ ನಿಂತರು. ಗೋವಾದಲ್ಲಿರುವ ಜಿಲ್ಲೆಯ ಮೀನುಗಾರರ ಹಿತರಕ್ಷಣೆಗೆ ಗೋವಾ ಮುಖ್ಯಮಂತ್ರಿ ಅವರೊಂದಿಗೆ ಮಾತುಕತೆ ನಡೆಸಿ, ಯಶಸ್ವಿಯೂ ಆದರು.
ಉದ್ಯೋಗಿಗಳಿಗೆ ಸಹಾಯ
ಕೊರೋನಾ ಸಂದರ್ಭದಲ್ಲಿ ತೊಂದರೆಯಾಗದಂತೆ ಗೋವಾದ ವಿವಿಧ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರವಾರದ ಯುವಜನತೆಗಾಗಿ ಗೋವಾ ಮುಖ್ಯಮಂತ್ರಿ ಅವರೊಂದಿಗೂ ಮಾತುಕತೆ ನಡೆಸಿದರು. ಗೋವಾ ಕಾರವಾರ ನಡುವೆ ರೈಲು ಸಂಪರ್ಕಕ್ಕಾಗಿ ರೇಲ್ವೆ ಸಚಿವರನ್ನು ಆಗ್ರಹಿಸಿದರು.
ಜಿಲ್ಲೆಗೆ ಸೂಪರ್ ಸ್ಪೆಷಲಿಟಿ ಆಸ್ಪತ್ರೆಗಾಗಿ ಶ್ರಮಿಸುತ್ತಿರುವ ನಾಯಕಿ
ಉತ್ತರ ಕನ್ನಡದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕೊರತೆ ಇರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಅಪಘಾತದಿಂದ ಗಾಯಗೊಂಡಿರುವವರು, ಹೃದಯ, ಮಿದುಳು, ಕಿಡ್ನಿ ಮತ್ತಿತರ ಕಾಯಿಲೆಗಳಿಗೆ ಒಳಗಾದವರಿಗೆ ತುರ್ತು ಚಿಕಿತ್ಸೆಗೆ ಕಾರವಾರದಲ್ಲಿ ಸೂಪರ್ ಸ್ಪೇಶಾಲಿಟಿ ಆಸ್ಪತ್ರೆ ನಿರ್ಮಿಸುವಂತೆ ಸರ್ಕಾರಕ್ಕೆ ಮೇಲಿಂದ ಮೇಲೆ ಆಗ್ರಹಿಸುತ್ತಿದ್ದಾರೆ. ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಇದಕ್ಕೆ ಸಮ್ಮತಿಯನ್ನೂ ವ್ಯಕ್ತಪಡಿಸಿದ್ದರು.
ಸೂಪರ್ ಸ್ಪೇಶಾಲಿಟಿ ಆಸ್ಪತ್ರೆಗಾಗಿ ನಾಲ್ಕು ವರ್ಷಗಳಿಂದ ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಇದುವರೆಗೆ ಸರ್ಕಾರಕ್ಕೆ 28 ಬಾರಿ ಅರ್ಜಿಗಳನ್ನು ನೀಡಿದ್ದಾರೆ. ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ, ಇಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವರಾದ ಸುಧಾಕರ್ ಹೀಗೆ ಎಲ್ಲರಿಗೆ ಮನವಿ ಮಾಡಿದ್ದಾರೆ. ಜತೆಗೆ ಆ ನಿಟ್ಟಿನಲ್ಲಿ ಗಂಭೀರ ಪ್ರಯತ್ನ ನಡೆಸುತ್ತಿದ್ದಾರೆ.
ಕ್ರಿಮ್ಸ್ ನಲ್ಲಿ ವೈದ್ಯಕೀಯ ಸೌಲಭ್ಯ ಕಲ್ಪಿಸಲು 160 ಕೋಟಿ ರೂ.ಗಳನ್ನು ಸರ್ಕಾರ ಬಿಡುಗಡೆ ಮಾಡಿತು. ಇದರಲ್ಲಿ ರೂಪಾಲಿ ಎಸ್.ನಾಯ್ಕ ಅವರ ಪಾತ್ರ ದೊಡ್ಡದು.
ಹೆಂಜಾ ನಾಯ್ಕ ಹೆಸರು ನಾಮಕರಣ
ಬ್ರಿಟೀಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಕಾರವಾರದ ಹೆಮ್ಮೆಯ ಪುತ್ರ ಹೆಂಜಾ ನಾಯ್ಕ ಅವರ ಹೆಸರನ್ನು ಕಾರವಾರ ಕೋಡಿಬಾಗ ರಸ್ತೆಗೆ ನಾಮಕರಣ ಹಾಗೂ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆಗೆ ಹೆಂಜಾ ನಾಯ್ಕ ಅವರ ಹೆಸರು ನಾಮಕರಣ ಮಾಡುವಲ್ಲಿ ಸರ್ಕಾರಿ ಆದೇಶ ಆಗುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ ವಿಶೇಷ ಆಸಕ್ತಿ ವಹಿಸಿದ್ದು, ಶಾಸಕರಾದ ರೂಪಾಲಿ ಎಸ್.ನಾಯ್ಕ ಎಲ್ಲ ಅಗತ್ಯ ಸಹಕಾರ ನೀಡಿದ್ದಾರೆ.
ಖಾರಲ್ಯಾಂಡ್ ಆಣೆಕಟ್ಟು
ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ಸಮುದ್ರದ ಉಪ್ಪು ನೀರು ಹೊಲಗದ್ದೆಗಳಿಗೆ ನುಗ್ಗಿ ಬೆಳೆ ಹಾನಿ ಆಗುತ್ತಿತ್ತು. ಇದನ್ನು ತಪ್ಪಿಸಲು ಖಾರಲ್ಯಾಂಡ್ ಒಡ್ಡು ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರಿಂದ ಸರ್ಕಾರ 4 ಕಡೆಗಳಲ್ಲಿ ಖಾರಲ್ಯಾಂಡ್ ಒಡ್ಡು ನಿರ್ಮಿಸಲು ಹಣ ಮಂಜೂರು ಮಾಡಿದೆ.
ಬಹುಗ್ರಾಮ ಕುಡಿಯುವ ನೀರು ಯೋಜನೆ
ಕದ್ರಾ ಆಣೆಕಟ್ಟಿನ ಹಿನ್ನೀರನ್ನು ಮೊದಲ ಬಾರಿಗೆ ಕಾರವಾರದ 9 ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆಯನ್ನು ರೂಪಾಲಿ ಎಸ್.ನಾಯ್ಕ ಜಾರಿಗೊಳಿಸಿದರು. ಪ್ರತಿ ಕುಟುಂಬಕ್ಕೂ ನೀರು ಸಿಗುವಂತಾಗಿದೆ.
ಗ್ರಾಮ ವಾಸ್ತವ್ಯ
ಅಂಕೋಲಾ ತಾಲೂಕಿನ ಅಚವೆಯಲ್ಲಿ ಕಂದಾಯ ಸಚಿವ ಆರ್.ಅಶೋಕ್ ಅವರ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟವರು ರೂಪಾಲಿ ಎಸ್.ನಾಯ್ಕ. ಗ್ರಾಮ ವಾಸ್ತವ್ಯದಿಂದ ಹಲವು ಸಮಸ್ಯೆಗಳು ಇತ್ಯರ್ಥಕಂಡವು.
ಪ್ರವಾಸಿ ಮಂದಿರ ನಿರ್ಮಾಣ
ಕಾರವಾರದ ಪ್ರವಾಸಿ ಮಂದಿರ ಶಿಥಿಲಗೊಂಡಿದ್ದನ್ನು ಗಮನಿಸಿ ಸರ್ಕಾರದಿಂದ 9.80 ಕೋಟಿ ರು. ಹಣ ಮಂಜೂರು ಮಾಡಿಸಿದ್ದು, ಪ್ರವಾಸಿ ಮಂದಿರದ ನಿರ್ಮಾಣಕ್ಕೆ ಚಾಲನೆ ದೊರೆತಿದೆ.
ಅಮದಳ್ಳಿ ಹೈದರಘಾಟ ರಸ್ತೆ
ಒಟ್ಟೂ 2.5 ಕೋಟಿ ರೂ.ವೆಚ್ಚದಲ್ಲಿ ಅಮದಳ್ಳಿ ಹೈದರಘಾಟ ರಸ್ತೆ ನಿರ್ಮಾಣಕ್ಕೆ ರೂಪಾಲಿ ಎಸ್.ನಾಯ್ಕ ಚಾಲನೆ ನೀಡಿದ್ದಾರೆ. ಇದರಿಂದ ಆ ಪ್ರದೇಶದ ಜನತೆಗೆ ಅನುಕೂಲವಾಗಲಿದೆ. ರಸ್ತೆ, ಸೇತುವೆ ಇತರ ನಿರ್ಮಾಣ ಕಾಮಗಾರಿಗಳು ಕ್ಷೇತ್ರದಲ್ಲಿ ನಿರಂತರವಾಗಿ ನಡೆಯುತ್ತಿವೆ.
ಕ್ಷೇತ್ರದ ಜನತೆಯ ಆಶಾಕಿರಣ, ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುವ ಹೆಮ್ಮೆಯ ಶಾಸಕಿ ಶ್ರೀಮತಿ ರೂಪಾಲಿ ನಾಯ್ಕ್ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ನಿಮ್ಮ ಸಾಧನೆ, ಅಭಿವೃದ್ಧಿ ಕುರಿತಾದ ಕನಸು ನನಸಾಗಲಿ ಎಂಬುದು ಕ್ಷೇತ್ರದ ಜನತೆಯ ಆಶಯ.