ಕರುಣೆ, ಪರೋಪಕಾರ ಸರ್ವಶ್ರೇಷ್ಠ ಗುಣ: ರಾಘವೇಶ್ವರ ಶ್ರೀ

ಗೋಕರ್ಣ: ತಮ್ಮ ಹಿತವನ್ನೇ ಬಲಿಕೊಟ್ಟು ಪರೋಪಕಾರ ಮಾಡುವುದು ಸತ್ಪುರುಷರ ಲಕ್ಷಣ. ಪರೋಪಕಾರ, ಕರುಣೆಯನ್ನು ಬದುಕಿನಲ್ಲಿ ತುಂಬಿಕೊಂಡು ಬದುಕಿನ ಸಾರ್ಥಕತೆ ಗಳಿಸಿಕೊಳ್ಳೋಣ ಎಂದು ಎಂದು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಕರೆ ನೀಡಿದರು. ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಬುಧವಾರ ಧರ್ಮಸಭೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.

ತಮಗೆ ತೊಂದರೆಯಾಗದಂತೆ ಪರೋಪಕಾರ ಮಾಡುವವರು ಸಾಮಾನ್ಯರು. ತಮ್ಮ ಸ್ವಾರ್ಥಕ್ಕಾಗಿ ಬೇರೆಯವರ ಶ್ರೇಯಸ್ಸು ಹಾಳು ಮಾಡುವವರು ಮಾನುಷ ರಾಕ್ಷಸರು. ಆದರೆ ತಮಗೆ ಯಾವ ಹಿತವೂ ಇಲ್ಲದಿದ್ದರೂ, ಬೇರೆಯವರಿಗೆ ತೊಂದರೆ ಕೊಡುವ ಇನ್ನೊಂದು ವರ್ಗವಿದೆ. ಇಂಥ ವರ್ಗವೂ ಇದೆ ಎದು ಬತೃಹರಿ ಹೇಳಿದ್ದಾಗಿ ವಿವರಿಸಿದರು.

ಹಿರಣ್ಯಕಶುಪು ತಪಸ್ಸು ಮಾಡುವಾಗ ಮೈಮೇಲೆ ಹುತ್ತ ಬೆಳೆದು ಕೇವಲ ಎಲುಬು ಮಾತ್ರ ಉಳಿದಿತ್ತು. ಹಾಗೆ ತನ್ನ ಮೇಲೂ ಕನಿಕರ ಇಲ್ಲದ ಅಪರೂಪದ ನಿದರ್ಶನ ಇದು. ಅಂತೆಯೇ ರಾವಣ ಕೂಡಾ ಹತ್ತು ಸಾವಿರ ವರ್ಷ ತಪಸ್ಸು ಮಾಡಿ ತನ್ನ ಒಂದೊಂದೇ ತಲೆಯನ್ನು ಕಡಿದು ಬ್ರಹ್ಮದೇವರಿಗೆ ಅರ್ಪಿಸುತ್ತಾ ಬರುತ್ತಾನೆ. ಇದು ರಾವಣನಿಗೆ ತನ್ನ ಬಗೆಯೂ ಕನಿಕರ ಇಲ್ಲದ ಪರಿ ಇದು ಎಂದು ಬಣ್ಣಿಸಿದರು. ರಾಮಾಯಣದ ಕೊನೆಯಲ್ಲಿ ರಾವಣ ಸಾವಿಗಾಗಿ ಯುದ್ಧ ಮಾಡಿದ. ಇದು ಆತನ ಮೇಲೂ ಆತನಿಗೆ ಕನಿಕರ ಇರಲಿಲ್ಲ ಎಂದು ವಿವರಿಸಿದರು.

ತನ್ನ ಮೇಲೆ ಮಾತ್ರ ಕರುಣೆ ಇರುವ ನಿದರ್ಶನ ಮಹಾಭಾರತದ ದುರ್ಯೋದನ. ತನ್ನವರೆಲ್ಲರನ್ನೂ ಯುದ್ಧದಲ್ಲಿ ಕಳೆದುಕೊಂಡ ಬಳಿಕ ಜೀವ ಉಳಿಸಿಕೊಳ್ಳುವ ಸಲುವಾಗಿ ವೈಶಂಪಾಯನ ಸರೋವರದಲ್ಲಿ ಅಡಗಿಕೊಳ್ಳುತ್ತಾನೆ ಎಂದರು. ಮಾನವರಿಗೆ ಸಾಮಾನ್ಯವಾಗಿ ತನ್ನ ಬಗ್ಗೆ ಹಾಗೂ ತನ್ನವರ ಬಗ್ಗೆ ಕರುಣೆ ಇರುವುದು ಸಹಜ. ಅಂತೆಯೇ ಮಾನವೋತ್ತಮರೂ ಇಂದಿನ ಸಮಾಜದಲ್ಲಿ ವಿರಳವಾಗಿ ಕಾಣಸಿಗುತ್ತಾರೆ. ತನ್ನದವರಲ್ಲದವರಿಗೂ ಸಹಾಯ ಮಾಡುವುದು ದೈವೀಗುಣ. ಪ್ರಾಣಿ ಪಕ್ಷಿಗಳು, ಆರ್ತರ ಮೇಲೆ ಇವರಿಗೆ ದಯೆ ಇರುತ್ತದೆ. ಇದು ಮಾನವೋತ್ತಮರ ಗುಣ ಎಂದು ವಿವರಿಸಿದರು.

ಇಂದ್ರನ ಪುತ್ರನಾದ ಕಾಗೆಯ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿದ್ದು ಇನ್ನೊಂದು ಸಂದರ್ಭ. ಬ್ರಹ್ಮಾಸ್ತ್ರದಿಂದ ರಕ್ಷಣೆಗಾಗಿ ಮೊರೆ ಹೋದಾಗ ಕಾಗೆಯ ಜೀವದ ಬದಲು ಒಂದು ಕಣ್ಣನ್ನು ಮಾತ್ರ ಕೀಳುತ್ತದೆ. ಇದು ಇನ್ನೊಂದು ನಿದರ್ಶನವಾದರೆ, ಯುದ್ಧದಲ್ಲಿ ಗಾಯಾಳುವಾಗಿದ್ದ ರಾವಣನಿಗೆ ವಿಶ್ರಾಂತಿ ಪಡೆದು ಮುಂದಿನ ದಿನ ಬಂದು ಯುದ್ಧ ಎದುರಿಸುವಂತೆ ಸೂಚಿಸುತ್ತಾನೆ. ಇದು ರಾಮನ ಶ್ರೇಷ್ಠಗುಣ ಎಂದು ವಿವರಿಸಿದರು.

ಧಾರ್ಮಿಕ ಕಾರ್ಯಕ್ರಮ ಅಂಗವಾಗಿ ಶ್ರೀಗಳಿಗೆ ತುಲಾಭಾರ ಸೇವೆ ನೆರವೇರಿತು. ರುದ್ರಹವನ, ರಾಮತಾರಕ ಹವನ, ಚಂಡೀಪಾರಾಯಣ, ಗಣಪತಿ ಹೋಮ, ಪವಮಾನ ಹೋಮಗಳು ನಡೆದವು. ಸುಳ್ಯದ ಕಾಂಚಿಕಾಮಕೋಟಿ ವೇದಪಾಠ ಶಾಲೆ ಮತ್ತು ಕಾರವಾರದ ಪದ್ಮಪುಷ್ಪ ಗುರುಕುಲ ಮಕ್ಕಳಿಂದ ಸಪ್ತಶತಿ ಪಾರಾಯಣ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಾಗರದ ಗೋಮಾತಾ ತಾಳಮದ್ದಳೆ ಬಳಗದಿಂದ ಸೀತಾಕಲ್ಯಾಣ ತಾಳಮದ್ದಳೆ ನಡೆಯಿತು.