ಭತ್ತ ಬೆಳೆಗೆ ಕೊಳವೆ ಹುಳು ಬಾಧೆ ನಿಯಂತ್ರಣಕ್ಕೆ ಹೀಗೆ ಮಾಡಿ: ಕೃಷಿ ಇಲಾಖೆ ಸಲಹೆ

ಕಾರವಾರ: ತಾಲೂಕಿನ ವಿವಿಧ ಭಾಗಗಳಲ್ಲಿ ಭತ್ತದ ಕೊಳವೆ ಹುಳುಬಾಧೆ ಕಾಣಿಸಿಕೊಂಡಿದ್ದು ಅದನ್ನು ನಿವಾರಿಸಲು ಕೃಷಿ ಇಲಾಖೆಯು ಸಲಹೆ ನೀಡಿದೆ. ಈ ಬಗ್ಗೆ ಬುಧವಾರ ಪತ್ರಿಕಾ ಹೇಳಿಕೆ ನೀಡಿರುವ ಸಹಾಯಕ ಕೃಷಿ ನಿರ್ದೇಶಕರು ಸಸಿ ಮಡಿಗಳಿಂದ ಶುರುವಾಗಿ ನಾಟಿ ಮಾಡಿದ ಗದ್ದೆಗಳಲ್ಲಿ ಸುಮಾರು 45 ರಿಂದ 50 ದಿನಗಳವರೆಗೆ (ಅಗಸ್ಟದಿಂದ ಅಕ್ಟೋಬರ್) ಭತ್ತದ ಕೊಳವೆ ಹುಳುಬಾಧೆ ಹೆಚ್ಚಾಗಿರುತ್ತದೆ.

ರೈತರು ತಮ್ಮ ಗದ್ದೆಗಳಲ್ಲಿ ಹುಳುಬಾಧೆ ಕಂಡು ಬಂದಲ್ಲಿ 2 ರಿಂದ 4 ಸೆಂ.ಮೀ ವರೆಗೆ ಗದ್ದೆಯಲ್ಲಿ ನೀರು ನಿಲ್ಲಿಸಿ ಇಬ್ಬರು ಹಗ್ಗದ ಎರಡು ತುದಿ ಹಿಡಿದು ಗದ್ದೆಯ ಒಂದು ಕಡೆಯಿಂದ ಮತ್ತೊಂದು ಕಡೆಗೆ ಗಿಡಗಳ ಮೇಲೆ ಬಡಿಯುತ್ತಾ ಸಾಗಬೇಕು. ಹುಳುಗಳು ನೀರಿರುವ ಜಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುವುದರಿಂದ ಕೆಲಕಾಲ ಗದ್ದೆಯಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಅಥವಾ ಕ್ಲೋರೊಫೈರಿಫಾಸ್ 2 ಮಿ.ಲೀ. ಅನ್ನು ಪ್ರತಿ ಲೀಟರ ನೀರಿಗೆ ಸೇರಿಸಿ ಎಕರೆಗೆ 200 ಲೀ. ಸಿಂಪರಣಾ ದ್ರಾವಣ ತಯಾರಿಸಿ ಸಾಯಂಕಾಲ 4 ರಿಂದ 6 ಗಂಟೆಯೊಳಗೆ ಗಿಡ ಹಾಗೂ ಬುಡ ತೊಯ್ಯುವಂತೆ ಸಿಂಪರಣೆ ಮಾಡಬೇಕು.

ಕ್ಲೋರೊಫೈರಿಫಾಸ್ ತಾಲ್ಲೂಕಿನ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ 08382-200223ಗೆ ಸಂಪರ್ಕಿಸಬಹುದಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.