ಬಾಗಲಕೋಟೆ: ಪ್ರಧಾನಿ ಮೋದಿ ಮನಗೆದ್ದ ಮುಧೋಳ ಶ್ವಾನವನ್ನು ಪಿಎಂ ಭದ್ರತಾ ತಂಡ ಎಸ್‌ಪಿಜಿಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಮುಧೋಳ ಶ್ವಾನ ಸಂಶೋಧನಾ ಕೇಂದ್ರದಿಂದ ಎರಡು ತಿಂಗಳ 2 ಗಂಡು ಮುಧೋಳ ನಾಯಿ ಮರಿಗಳನ್ನು ಎಸ್‌ಪಿಜಿ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.
ಜಿಲ್ಲೆಯ ಮುಧೋಳ ತಾಲೂಕಿನ ತಿಮ್ಮಾಪುರ ಬಳಿ ಇರುವ ಶ್ವಾನ ಸಂಶೋಧನಾ ಕೆಂದ್ರಕ್ಕೆ ಬಂದಿದ್ದ ವೆಟರ್ನರಿ ವೈದ್ಯ ಡಾ. ಬಿ. ಎಮ್ ಪಂಚಬುದ್ದೆ ಹಾಗೂ ಇಬ್ಬರು ಶ್ವಾನ ತರಬೇತುದಾರರು ಒಂದು ತಾಸು ಶ್ವಾನಗಳ ಪರೀಕ್ಷೆ ನಡೆಸಿದರು. ಈ ವೇಳೆ ನಾಯಿಯ ಆರೋಗ್ಯ, ಲಕ್ಷಣ, ಓಟ, ಸಮಯಪ್ರಜ್ಞೆ, ಬುದ್ಧಿ ಹಾಗೂ ಚಾಕಚಕ್ಯತೆ ಬಗ್ಗೆ ಶ್ವಾನಗಳನ್ನು ಪರೀಕ್ಷಿಸಿದ್ದಾರೆ. ಈ ನಾಯಿಗಳಿಗೆ ಎಸ್‌ಪಿಜಿ ಭದ್ರತಾ ಪಡೆಯಲ್ಲಿ ತರಬೇತಿ ನೀಡಿ ನಂತರ ಬಳಸಿಕೊಳ್ಳಲಾಗುತ್ತದೆ ಎಂದು ಹೇಳಿದರು.
ಹಿಂದೊಮ್ಮೆ ಮನ್ ಕಿ ಬಾತ್ ನಲ್ಲಿ ಮುಧೋಳ ಶ್ವಾನದ ಬಗ್ಗೆ ಮೋದಿ ಮಾತನಾಡಿದ್ದರು. ಈಗಾಗಲೇ ಭಾರತೀಯ ಸೇನೆ, ಸಿಆರ್‌ಪಿಎಫ್, ಐಟಿಬಿಪಿ, ವಾಯುಸೇನೆಯಲ್ಲೂ ಮುಧೋಳ ಶ್ವಾನಗಳನ್ನು ಬಳಕೆ ಮಾಡಲಾಗಿದೆ. ಏಪ್ರಿಲ್ ನಲ್ಲೇ ಎರಡು ಶ್ವಾನಗಳನ್ನು ಹಸ್ತಾಂತರಿಸಲಾಗಿದ್ದು, ಭದ್ರತಾ ದೃಷ್ಟಿಯಿಂದ ಇಷ್ಟು ದಿನ ಗೌಪ್ಯವಾಗಿರಿಸಲಾಗಿತ್ತು. ವಿಚಾರ ಇದೀಗ ಬೆಳಕಿಗೆ ಬಂದಿದ್ದು, ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ ಎಂದು ಮುಧೋಳ ಶ್ವಾನ ಸಂಶೋದನಾ ಕೇಂದ್ರದ ಸಹಾಯಕ ಪ್ರಾದ್ಯಾಪಕ ಹಾಗೂ ಮುಖ್ಯಸ್ಥ ಸುಶಾಂತ ಹಂಡಗೆ ತಿಳಿಸಿದ್ದಾರೆ.