ಭದ್ರಾವತಿ ನಗರದ ಪ್ರಮುಖ ಬೀದಿಗಳಲ್ಲಿ ಪೊಲೀಸರಿಂದ ಪಥ ಸಂಚಲನ
ಶಿವಮೊಗ್ಗ: ಶಿವಮೊಗ್ಗದಲ್ಲಿ ಫ್ಲೆಕ್ಸ್ ವಿಚಾರದಲ್ಲಿ ಗಲಾಟೆ ಹಾಗೂ ಭದ್ರಾವತಿಯಲ್ಲಿ ಭಜರಂಗದಳ ಕಾರ್ಯಕರ್ತ ಸುನೀಲ್ ಮೇಲೆ ಹಲ್ಲೆ ಹಿನ್ನೆಲೆ ಭದ್ರಾವತಿಯಲ್ಲಿ ಆರ್ ಎಎಫ್ ತಂಡ ಹಾಗು ಪೊಲೀಸರು ಪಥ ಸಂಚಲನ ನಡೆಸಿದ್ದಾರೆ. ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಭದ್ರಾವತಿ ನಗರದ ಪ್ರಮುಖ ರಸ್ತೆಯಲ್ಲಿ ಪಥ ಸಂಚಲನ ನಡೆಸಲಾಗಿದೆ. ಪಥ ಸಂಚಲನದಲ್ಲಿ ಪೂರ್ವ ವಲಯ ಐಜಿಪಿ ತ್ಯಾಗರಾಜನ್, ಎಸ್ ಪಿ ಲಕ್ಷ್ಮಿಪ್ರಸಾದ್ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಪೊಲೀಸರು ಭಾಗಿಯಾಗಿದ್ದಾರೆ. ಸಾರ್ವಜನಿಕರಲ್ಲಿ ಆತಂಕ ಹೋಗಲಾಡಿಸುವ ಸಲುವಾಗಿ, ನಿಮ್ಮೊಂದಿಗೆ ನಾವಿದ್ದೇವೆ ಎಂಬ ಭರವಸೆ ಮೂಡಿಸುವ ಸಲುವಾಗಿ ಪಥ ಸಂಚಲನ ನಡೆಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಶಿವಮೊಗ್ಗದಲ್ಲೇ ಮೊಕ್ಕಾಂ ಹೂಡಿದ ಎಡಿಜಿಪಿ ಅಲೋಕ್ ಕುಮಾರ್
ಮೂರನೇ ದಿನವೂ ಕೂಡಾ ಎಡಿಜಿಪಿ ಅಲೋಕ್ ಕುಮಾರ್ ಶಿವಮೊಗ್ಗದಲ್ಲಿ ಮೊಕ್ಕಾಂ ಹೂಡಿದ್ದಾರೆ. ಇಂದು ಕೂಡಾ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದು ಭದ್ರಾವತಿಗೆ ತೆರಳಿ ನಂತರ ಶಿವಮೊಗ್ಗಕ್ಕೆ ಬರಲಿದ್ದಾರೆ. ಪರಿಸ್ಥಿತಿ ಹತೋಟಿಗೆ ಬರುವವರೆಗೂ ಎಡಿಜಿಪಿ ಅಲೋಕ್ ಕುಮಾರ್ ಶಿವಮೊಗ್ಗದಲ್ಲಿ ಇರಲಿದ್ದಾರೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ನಾಲ್ಕು ಜನ ಆರೋಪಿಗಳನ್ನು ಬಂಧಿಸಿದ್ದು ಉಳಿದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಅಲೋಕ್ ಕುಮಾರ್ ಹೇಳಿದ್ದೇನು.?
ಇನ್ನು ಈ ವೇಳೆ ಮಾತನಾಡಿದ ಎಡಿಜಿಪಿ ಅಲೋಕ್ ಕುಮಾರ್ ಪೊಲೀಸ್ ಇಲಾಖೆ ಸಮರ್ಥವಾಗಿದ್ದು ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸುವ ಸಲುವಾಗಿ ಪಥ ಸಂಚಲನ ಮಾಡುತ್ತಿದ್ದೇವೆ. ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಆಗಲು ಬಿಡುವುದಿಲ್ಲ. ಸಾರ್ವಜನಿಕರ ಆಸ್ತಿಪಾಸ್ತಿ ಜೀವಕ್ಕೆ ಅಪಾಯ ಆಗುವುದಿಲ್ಲ ಎಂದು ಹೇಳಿದ್ದಾರೆ. ಚಾಕು ಇರಿತ ನಂತರ ಮತ್ತೆ ಅಂತಹ ಘಟನೆ ಯಾವುದು ನಡೆದಿಲ್ಲ. ಭದ್ರಾವತಿಯಲ್ಲಿ ವೈಯಕ್ತಿಕ ವಿಚಾರಕ್ಕೆ ಗಲಾಟೆ ಆಗಿದೆ. ಪರಿಸ್ಥಿತಿ ಶಾಂತಿಯುತವಾಗಿದೆ. ಪೊಲೀಸ್ ಸಿಬ್ಬಂದಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ ಎಂದರು.