ಬಾಳೆಗೊನೆ ಸಾಗಿಸುವ ವಾಹನದಲ್ಲಿ ಕಡವೆ ಕೊಂಬು, ಕಟ್ಟಿಗೆ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳ ಬಂಧನ

ಕುಮಟಾ: ಬಾಳೆಗೊನೆ ಸಾಗಿಸುವ ವಾಹನದಲ್ಲಿ ಅನಧಿಕೃತವಾಗಿ ಕಾಡುಪ್ರಾಣಿಗಳ ಕೊಂಬು ಹಾಗೂ ಕಟ್ಟಿಗೆಗಳನ್ನು ಸಾಗಿಸುತ್ತಿದ್ದಾಗ ದಾಳಿ ನಡೆಸಿದ ಅರಣ್ಯ ಅಧಿಕಾರಿಗಳು ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ಕುಮಟಾ ತಾಲೂಕಿನ ಕತಗಾಲ್ ಅರಣ್ಯ ವ್ಯಾಪ್ತಿಯಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.

ವಾಹನ ಚಾಲಕ ಶಿರಸಿಯ ಕಸ್ತೂರ್ ಬಾ ನಗರ ನಿವಾಸಿ ಮಹಮ್ಮದ್ ಅಸ್ಲಾಂ ಬಾಬಾಜಾನ್ ಕರ್ಕಿಮಕ್ಕಿ (42) ಹಾಗೂ ಶಿರಸಿಯ ಅಂಜೂ ಫರ್ನಿಚರ್ ಮಾಲಿಕ ಅಂಥೋನ್ ಬಿ. ನರೋನಾ (68) ಬಂಧಿತ ಆರೋಪಿಗಳಾಗಿದ್ದಾರೆ. ಮಂಗಳವಾರ ತಡರಾತ್ರಿ ದೊರೆತ ಖಚಿತ ಮಾಹಿತಿ ಆಧರಿಸಿ ಹೊನ್ನಾವರ ಉಪವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ ಕುಮಾರ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗುರುದತ್ ಶೇಟ್ ಅವರ ಮಾರ್ಗದರ್ಶನದಲ್ಲಿ ಕತಗಾಲ ವಲಯ ಅರಣ್ಯಾಧಿಕಾರಿ ದೀಪಕ ನಾಯ್ಕ ಅವರ ನೇತೃತ್ವದಲ್ಲಿ ಬುಧವಾರ ಬೆಳಿಗ್ಗೆ ಕಾರ್ಯಾಚರಣೆ ನಡೆಸಿದ ತಂಡವು ಬಾಳೆಗೊನೆ ಸಾಗಿಸುತ್ತಿದ್ದ ಬೊಲೆರೊ ವಾಹನವನ್ನು ತಡೆದು ತಪಾಸಣೆ ನಡೆಸಿದ್ದಾರೆ.

ಈ ವೇಳೆ ವಾಹನದಲ್ಲಿ 4 ಕಡವೆ ಕೊಂಬುಗಳು, ಜಂಗ್ಲಿ ಜಾತಿಯ ಕೊರೆದು ಪ್ಲೇನಿಂಗ್ ಮಾಡಿದ 54 ಘನ ಮೀಟರ್ ನಗಗಳು ಪತ್ತೆಯಾಗಿವೆ. ತಕ್ಷಣ ಆರೋಪಿಗಳನ್ನು ಬಂಧಿಸಿ ಕಡವೆ ಕೊಂಬು, ಕಟ್ಟಿಗೆ ಹಾಗೂ ಸುಮಾರು 8 ಕ್ವಿಂಟಲ್ ಬಾಳೆಕೊನೆಗಳನ್ನು ವಶಪಡಿಸಿಕೊಂಡ ಅರಣ್ಯ ಅಧಿಕಾರಿಗಳ ತಂಡವು ವನ್ಯಜೀವಿ ಹಾಗೂ ಅರಣ್ಯ ಕಾಯಿದೆಯಡಿ ಮೊಕದ್ದಮೆ ದಾಖಲಿಸಿದೆ. ಬಳಿಕ ಆರೋಪಿತರನ್ನು ಕುಮಟಾ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
ಈ ಕಾರ್ಯಚರಣೆಯಲ್ಲಿ ಕತಗಾಲ ಉಪವಲಯ ಅರಣ್ಯಾಧಿಕಾರಿ ಬಿ. ಎನ್. ಬಂಕಾಪುರ, ಅರಣ್ಯ ರಕ್ಷಕರಾದ ಮಹೇಶ ಹವಳೆಮ್ಮನವರ್, ಗಣೇಶ ನಾಯಕ, ಸದಾಶಿವ ಪುರಾಣಿಕ್, ವಾಹನ ಚಾಲಕ ವಸಂತ ನಾಯ್ಕ, ಸಿಬ್ಬಂದಿಗಳಾದ ನಾಗೇಶ ಪಟಗಾರ, ಶಂಕರ ಗೌಡ, ಕಿರಣ ನಾಯ್ಕ ಪಾಲ್ಗೊಂಡಿದ್ದರು.

ಶಿರಸಿಯಿಂದ ಗೋವಾಕ್ಕೆ ಸಾಗಾಟವಾಗುತ್ತಿದ್ದ ನಾಲ್ಕು ಜಿಂಕೆ ಕೊಂಬು ಹಾಗೂ ಕಟ್ಟಿಗೆ ಸಾಗಾಟ ಮಾಡುತ್ತಿದ್ದಾಗ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕತಗಾಲ ಅರಣ್ಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.