ಶಿರಸಿ-ಕುಮಟಾ ಹೆದ್ದಾರಿ ಕಾಮಗಾರಿ ಮುಗಿಯೋದ್ಯಾವಾಗ.?! ಹದಗೆಟ್ಟ ರಸ್ತೆಯಲ್ಲಿ ಹೈರಾಣಾದ ಪ್ರಯಾಣಿಕರು.!

ಶಿರಸಿ: ಶಿರಸಿ ಕುಮಟಾ ರಸ್ತೆ ಈಗ ಸಂಪೂರ್ಣ ಹದಗೆಟ್ಟಿದ್ದು, ಸಂಚಾರವೇ ದುಸ್ತರವಾಗಿದೆ. ವಾಹನ ಸವಾರರು ಹೊಂಡ ತಪ್ಪಿಸಿ ಮುಂದೆ ಸಾಗಲು ಇನ್ನಿಲ್ಲದ ಸಾಹಸ ಪಡುತ್ತಿದ್ದಾರೆ.

ಹೌದು.! ಶಿರಸಿ ಕುಮಟಾ ರಸ್ತೆ ಈಗ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆ ಆಗಿದೆ. ರಸ್ತೆ ಲೊಕೋಪಯೋಗಿ ಇಲಾಖೆಯಿಂದ ಕೈ ತಪ್ಪಿ ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಗೆ ಒಳಪಟ್ಟು ಎರಡು ವರ್ಷಗಳೇ ಕಳೆದುಹೋಗಿವೆ. ಹೀಗಾಗಿ, ರಸ್ತೆ ಹೊಂಡಗಳ ಬಗ್ಗೆ ಲೊಕೋಪಯೋಗಿ ಇಲಾಖೆ ಏನೂ ತಲೆಕೆಡಿಸಿಕೊಳ್ಳುತ್ತಿಲ್ಲ. ರಸ್ತೆ ಜವಾಬ್ದಾರಿ ವಹಿಸಿಕೊಂಡಿರುವ ಹೆದ್ದಾರಿ ಪ್ರಾಧಿಕಾರ, ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ಗುತ್ತಿಗೆಯನ್ನು ಆರ್ ಎನ್ ಎಸ್ ಸಂಸ್ಥೆಗೆ ವಹಿಸಿದೆ.

ಕಳೆದ ಎರಡು ವರ್ಷಗಳಿಂದ ಹೆದ್ದಾರಿ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಶಿರಸಿಯಿಂದ ಕೊಳಗಿಬೀಸ್ ವರೆಗಿನ 10 ಕಿ.ಮೀ.ಗಳಷ್ಟು ದೂರ ಹೆದ್ದಾರಿ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ವಾಹನಗಳು ಈ 10 ಕಿಮೀ ದೂರವನ್ನು ಕೆಲವೇ ನಿಮಿಷಗಳಲ್ಲಿ ಕ್ರಮಿಸಬಹುದಾಗಿದೆ. ಆದರೆ, ಕೊಳಗಿಬೀಸ್ ನಿಂದ ಕುಮಟಾವರೆಗಿನ 50 ಕಿ ಮೀ ರಸ್ತೆ ಸಂಚಾರ ನರಕ ಸದೃಷ.!

ಈ ಮಾರ್ಗದ ಉದ್ದಕ್ಕೂ ಆರ್ ಎನ್ ಎಸ್ ರಸ್ತೆ ಸಿಡಿ ನಿರ್ಮಾಣ ಕಾರ್ಯ ನಡೆಸಿದ್ದು, ಇಲ್ಲಿಯ ಹಲವು ಸ್ಥಳಗಳಲ್ಲಿ ಒಮ್ಮೆ ಕೇವಲ ಒಂದು ವಾಹನ ಮಾತ್ರ ದಾಟುವಂತಿದೆ. ಉಳಿದೆಡೆ ರಸ್ತೆ ಹೊಂಡಗಳು ಬೃಹದಾಕಾರವಾಗಿ ಬೆಳೆದು ವಾಹನ ಚಾಲಕರನ್ನು ಕಾಡುತ್ತಿವೆ. ರಸ್ತೆ ಉನ್ನತೀಕರಣಗೊಳಿಸುವ ವೇಳೆ ಪ್ರಯಾಣಿಕರಿಗೆ, ವಾಹನಗಳ ಸಂಚಾರಕ್ಕೆ ತೊಡಕಾಗುವುದು ಸಹಜ. ಆದರೆ, ಶಿರಸಿ ಕುಮಟಾ ರಸ್ತೆಯ ಗೋಳು ಆರಂಭಗೊಂಡು ಈಗಾಗಲೇ ಎರಡು ವರ್ಷಗಳು ಕಳೆದುಹೋಗಿವೆ. ಈಗಿನ ಸ್ಥಿತಿ ಗಮನಿಸಿದರೆ ಇನ್ನೂ ಎರಡು ವರ್ಷಗಳ ಕಾಲ ಇದೇ ಸಮಸ್ಯೆ ಮುಂದುವರಿಯವಂತೆ ಕಾಣುತ್ತಿದೆ. ವಾಹನ ದಟ್ಟಣೆ ಜಾಸ್ತಿ ಇರುವ ಈ ರಸ್ತೆಯನ್ನು ಕನಿಷ್ಟ ನಿರ್ವಹಣೆಯನ್ನಾದರೂ ಮಾಡಬಾರದೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.