ಬೆಂಗಳೂರು, ಜನವರಿ 31: ಬಾಬುಸಾಬ್ ಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು 8 ಜನರು ಮೃತಪಟ್ಟಿದ್ದರು. 2024ರ ಅಕ್ಟೋಬರ್ 22ರಂದು ದುರ್ಘಟನೆ ಸಂಭವಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ವರದಿ ಐಐಎಸ್ಸಿಯಿಂದ ಹೆಣ್ಣೂರು ಪೊಲೀಸರ ಕೈಸೇರಿದೆ. ಸದ್ಯ ಈ ವರದಿ ಆಧರಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಅಕ್ಟೋಬರ್ 22 ರಂದು ಬಾಬುಸಾಬ್ ಪಾಳ್ಯದಲ್ಲಿ ದುರ್ಘಟನೆ ಸಂಭವಿಸಿತ್ತು. ಸಿಎಂ ಸಿದ್ದರಾಮಯ್ಯ ಖುದ್ದು ಸ್ಥಳಕ್ಕೆ ಭೇಟಿ ನೀಡಿ ತನಿಖೆಗೆ ಸೂಚಿಸಿದ್ದರು. ಕಟ್ಟಡದ ಅಡಿಪಾಯ ಸರಿಯಾಗಿ ಹಾಕದಿದ್ದಕ್ಕೆ ದುರ್ಘಟನೆ ಕಾರಣವೆನ್ನಲಾಗಿತ್ತು.
ಕಟ್ಟಡ ನಿರ್ಮಾಣಕ್ಕೂ ಮೊದಲು ಆಳವಿದ್ದ ಸ್ಥಳ ಎತ್ತರಿಸಲಾಗಿತ್ತು. ಆ ಬಳಿಕ ಪರೀಕ್ಷಿಸದೆ ಸಾಧಾರಣವಾಗಿ ಅಡಿಪಾಯ ಹಾಕಿದ್ದರು. ಕಡಿಮೆ ಪ್ರಮಾಣದಲ್ಲಿ ಫೌಂಡೇಷನ್ ಹಾಕಿ ಎಡವಟ್ಟಾಗಿತ್ತು. ಕಟ್ಟಡದ ತೂಕ ಹೆಚ್ಚಾಗಿ ಪಿಲ್ಲರ್ಗಳು ಕುಸಿತಗೊಂಡಿದ್ದವು. ಸದ್ಯ ವರದಿ ಆಧರಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ದುರ್ಘಟನೆಗೆ ಸಂಬಂಧಿಸಿದಂತೆ ಲೋಕಾಯುಕ್ತರು ಸಹ ಸ್ಥಳಕ್ಕೆ ಆಗಮಿಸಿ ಕ್ರಮಕ್ಕೆ ಆಗ್ರಹಿಸಿದ್ದರು. ಈ ಸಂಬಂಧ ಎಫ್ಐಆರ್ ದಾಖಲಿಸಿಕೊಂಡಿದ್ದ ಹೆಣ್ಣೂರು ಠಾಣಾ ಪೊಲೀಸರು, ಕಟ್ಟಡ ಮಾಲೀಕರಾದ ಮುನಿರಾಜು ರೆಡ್ಡಿ, ಮಗ ಭುವನ್ ರೆಡ್ಡಿ ಬಂಧನವಾಗಿತ್ತು. ಬಿಬಿಎಂಪಿ ಇಂಜಿನಿಯರ್ಗಳನ್ನ ಅಮಾನತು ಮಾಡಲಾಗಿತ್ತು. ಬರೋಬ್ಬರಿ ಎಂಟು ಜನರು ಕಟ್ಟಡ ಅವಶೇಷಗಳ ಅಡಿ ಸಿಲುಕಿ ಸಾವನ್ನಪ್ಪಿದ್ದರೆ, ಅದೃಷ್ಟವಶಾತ್ ಮೂವರು ಬದುಕುಳಿದು ಪಾರಾಗಿದ್ದರು.

60X40 ಜಾಗದಲ್ಲಿ ಅನಧಿಕೃತ ಮತ್ತು ಅವೈಜ್ಞಾನಿಕವಾಗಿ ಕಟ್ಟಡ ನಿರ್ಮಾಣ ಮಾಡುತ್ತಿದ್ದರು ಎನ್ನಲಾಗಿತ್ತು. ನಾಲ್ಕು ಅಂತಸ್ತಿನ ಕಟ್ಟಡಕ್ಕೆ ಅನುಮತಿ ಪಡೆದು, 7 ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಲಾಗ್ತಿತ್ತು. 6ನೇ ಅಂತಸ್ತು ನಿರ್ಮಿಸಲಾಗಿದ್ದು, 7ನೇ ಅಂತಸ್ತಿನ ಕಾಮಗಾರಿ ವೇಳೆ ಕಟ್ಟಡ ಕುಸಿದಿತ್ತು. ನಿರಂತರವಾಗಿ ಕಾರ್ಯಾಚರಣೆ ನಡೆಸಿದ್ರೂ ಆರು ಕಾರ್ಮಿಕರ ಪ್ರಾಣ ಉಳಿಸಿಕೊಳ್ಳಲು ಆಗಲಿಲ್ಲ. ಅರ್ಮಾನ್, ತ್ರಿಪಾಲ್, ಮೊಹಮ್ಮದ್ ಸಾಹಿಲ್, ಶಂಕರ್, ಸತ್ಯರಾಜ್ ಎಂಬುವವರು ಬಲಿಯಾಗಿದ್ದರು.