ರಾಜ್‌ಕೋಟ್ ಪಂದ್ಯದ ಸೋಲಿನ ನಂತರ ಎಚ್ಚೆತ್ತುಕೊಂಡಿರುವ ಟೀಂ ಇಂಡಿಯಾ ತನ್ನ ತಂಡದಲ್ಲಿ ದೊಡ್ಡ ಬದಲಾವಣೆ ಮಾಡಿದೆ. ಪುಣೆಯಲ್ಲಿ ನಡೆಯುತ್ತಿರುವ ನಾಲ್ಕನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾದಲ್ಲಿ 3 ಪ್ರಮುಖ ಬದಲಾವಣೆಗಳನ್ನು ಮಾಡಿದೆ. ರಿಂಕು ಸಿಂಗ್ ಮತ್ತು ಅರ್ಷದೀಪ್ ಸಿಂಗ್ ತಂಡಕ್ಕೆ ಮರಳಿದ್ದು, ಇವರ ಜೊತೆಗೆ ಶಿವಂ ದುಬೆ ಕೂಡ ತಂಡದಲ್ಲಿ ಪುನರಾಗಮನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಧ್ರುವ್ ಜುರೆಲ್, ಮೊಹಮ್ಮದ್ ಶಮಿ, ವಾಷಿಂಗ್ಟನ್ ಸುಂದರ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ಟಿ20 ಸರಣಿಯ ಈ ಪಂದ್ಯ ಅತ್ಯಂತ ಮಹತ್ವದ್ದಾಗಿದ್ದು, ಒಂದೆಡೆ, ಟಿ20 ಸರಣಿಯನ್ನು ಸಮಬಲಗೊಳಿಸಲು ಇಂಗ್ಲೆಂಡ್ ಎದುರು ನೋಡುತ್ತಿದ್ದರೆ, ಇತ್ತ ಟೀಂ ಇಂಡಿಯಾ ಪುಣೆ ಪಂದ್ಯ ಗೆದ್ದು ಸರಣಿಯನ್ನು ಸೀಲ್ ಮಾಡಲು ಬಯಸಿದೆ.

ಶಮಿ ಔಟ್
ಮೊಹಮ್ಮದ್ ಶಮಿ ಬಹಳ ದಿನಗಳ ನಂತರ ಭಾರತ ತಂಡದಲ್ಲಿ ಕಾಣಿಸಿಕೊಂಡಿದ್ದರು. ಅವರಿಗೆ ರಾಜ್‌ಕೋಟ್ ಟಿ20ಯಲ್ಲಿ ಆಡುವ ಅವಕಾಶವನ್ನು ನೀಡಲಾಯಿತು. ಆದರೆ ಶಮಿಗೆ ಯಾವುದೇ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಇಂದಿನ ಪಂದ್ಯದಿಂದ ಅವರನ್ನು ಆಡುವ ಹನ್ನೊಂದರಿಂದ ಕೈಬಿಡಲಾಗಿದೆ. ಆದರೆ ಮೊಹಮ್ಮದ್ ಶಮಿಯನ್ನು ಏಕೆ ತಂಡದಿಂದ ಕೈಬಿಡಲಾಗಿದೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ.
ಸುಂದರ್-ಜುರೆಲ್ ಫೇಲ್
ವಾಷಿಂಗ್ಟನ್ ಸುಂದರ್ ಕೊನೆಯ 2 ಟಿ20 ಪಂದ್ಯಗಳಲ್ಲಿ ಆಡಿದ್ದು, ಎರಡೂ ಪಂದ್ಯಗಳಲ್ಲಿ ವಿಶೇಷ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. ಆಡಿದ ಎರಡು ಟಿ20 ಪಂದ್ಯಗಳಲ್ಲಿ 32 ರನ್ ಗಳಿಸಿದರೆ, ಬೌಲಿಂಗ್ನಲ್ಲಿ ಮಾತ್ರ ಯಾವುದೇ ವಿಕೆಟ್ ಪಡೆಯಲಿಲ್ಲ. ಇತ್ತ ಜುರೇಲ್ ಕೂಡ ಎರಡೂ ಟಿ20 ಪಂದ್ಯಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಲಿಲ್ಲ. ರಿಂಕು ಸಿಂಗ್ ಬದಲಿಗೆ ತಂಡಕ್ಕೆ ಸೇರಿಕೊಂಡಿದ್ದ ಜುರೇಲ್, ಇದೀಗ ರಿಂಕುಗಾಗಿ ತಮ್ಮ ಸ್ಥಾನವನ್ನು ಬಿಟ್ಟುಕೊಟ್ಟಿದ್ದಾರೆ.

ಶಿವಂ ದುಬೆಗೆ ಅವಕಾಶ
ಮೊದಲಿಗೆ ಶಿವಂ ದುಬೆ ಅವರನ್ನು ಈ ಸರಣಿಗೆ ತಂಡದಲ್ಲಿ ಆಯ್ಕೆ ಮಾಡಿರಲಿಲ್ಲ. ಆದರೆ ನಿತೀಶ್ ರೆಡ್ಡಿ ಗಾಯಗೊಂಡಿದ್ದರಿಂದ ದುಬೆಗೆ ತಂಡದಲ್ಲಿ ಅವಕಾಶ ಸಿಕ್ಕಿದೆ. ಇದೀಗ ಪ್ಲೇಯಿಂಗ್ ಇಲೆವೆನ್ನಲ್ಲಿಯೂ ಶಿವಂ ದುಬೆಗೆ ಅವಕಾಶ ನೀಡಲಾಗಿದೆ. ಇದಕ್ಕೆ ಪ್ರಮುಖ ಕಾರಣ ಸ್ಪಿನ್ನರ್‌ಗಳ ವಿರುದ್ಧ ಅವರ ಅದ್ಭುತ ಪ್ರದರ್ಶನ. ಆದಿಲ್ ರಶೀದ್ ಟಿ20 ಸರಣಿಯಲ್ಲಿ ಟೀಂ ಇಂಡಿಯಾಗೆ ಸಾಕಷ್ಟು ತೊಂದರೆ ನೀಡಿದ್ದು, ಅವರನ್ನು ಎದುರಿಸಲು ಶಿವಂ ದುಬೆ ಅವರನ್ನು ತಂಡದಲ್ಲಿ ಆಯ್ಕೆ ಮಾಡಲಾಗಿದೆ.

ಭಾರತ ತಂಡ: ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ರಿಂಕು ಸಿಂಗ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್ ಮತ್ತು ವರುಣ್ ಚಕ್ರವರ್ತಿ.