ಕುಮಟಾ: 75 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಪಟ್ಟಣದ ಕೊಂಕಣ ಎಜ್ಯುಕೇಶನ್ ಟ್ರಸ್ಟ್‌ನ ಅಂಗಸಂಸ್ಥೆಗಳ ಸಹಯೋಗದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ವಿಠ್ಠಲ ನಾಯಕ ಧ್ವಜಾರೋಹಣೆ ನೆರವೇರಿಸಿ ಧ್ವಜವಂದನೆ ಸಲ್ಲಿಸಿದರು.
ಕಾರ್ಯದರ್ಶಿ ಮುರಳೀಧರ ಪ್ರಭು ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿ, ಇಂದಿನ ವಿದ್ಯಾರ್ಥಿಗಳು ಭಾರತವನ್ನು ವಿಶ್ವ ಗುರುವಾಗಿಸುವಲ್ಲಿ ಮಹತ್ತರ ಪಾತ್ರ ವಹಿಸಬೇಕು. ನಮ್ಮೆಲ್ಲರ ಕರ್ತವ್ಯವನ್ನು ನಾವು ಸ್ಮರಿಸಬೇಕು. ಅಮೃತ ಮಹೋತ್ಸವದ ಈ ಘಳಿಗೆಯಲ್ಲಿ ’ಡೈಮಂಡ್ ರನ್’ ಕಾರ‍್ಯಕ್ರಮವನ್ನು ಸಂಯೋಜಿಸಿ, ಸಂಸ್ಥೆಯ 75 ವಿದ್ಯಾರ್ಥಿಗಳು ನಗರದ ಬೀದಿಗಳಲ್ಲಿ ಜಾಗೃತಿ ಕಾರ‍್ಯಕ್ರಮವನ್ನು ಹಮ್ಮಿಕೊಂಡಿದ್ದು ಶತಮಾನೋತ್ಸವದ ಕಡೆಗೆ ನಾವು ಚಲಿಸುತ್ತಿರುವುದನ್ನು ಅರ್ಥೈಸುವಂತೆ ಮಾಡಿತು ಎಂದರು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ವಾಲಗಳ್ಳಿಯ ಶಾಂತಾ ಶೆಟ್ಟಿ, ಹಾಗೂ ಬರ್ಗಿಯ ಶ್ರೀಧರ ಕಾಮತ ಕುಟುಂಬದವರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಕಾಲೇಜು ವಿದ್ಯಾರ್ಥಿಗಳ ನೃತ್ಯ ಕಾರ‍್ಯಕ್ರಮಕ್ಕೆ ಮೆರಗು ತಂದಿತ್ತು. ಅಮೃತ ಮಹೋತ್ಸವದ ಸಂದರ್ಭದಲ್ಲಿ ಏರ್ಪಡಿಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ 95 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸುಮಾರು 75 ಕ್ಕೂ ಅಧಿಕ ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟಗಾರರ ವೇಷ-ಭೂಷಣ ತೊಟ್ಟು ಧ್ವಜಾರೋಹಣ ಸಂದರ್ಭದಲ್ಲಿ ಹಾಜರಿದ್ದು ಸ್ವಾತಂತ್ರ್ಯಕ್ಕಾಗಿ ಪ್ರಾಣ ತೆತ್ತ ಮಹನೀಯರುಗಳನ್ನು ಸ್ಮರಿಸುವಂತೆ ಮಾಡಿದರು.
ಇಂಡಿಯನ್ ಬುಕ್ ಆಫ್ ರೆಕಾರ್ಡ್‌ನ ಸಾಧಕ, ಸಂಸ್ಥೆಯ ಯುಕೆಜಿ ವಿದ್ಯಾರ್ಥಿ ಸಂಪ್ರೀತ್ ನಾಯ್ಕ ಭಾಷಣ ಹಾಗೂ ದೇಶಭಕ್ತಿ ಗೀತೆ ಗಮನ ಸೆಳೆಯಿತು. ಹಿರಿಯ ರಾಜಕಾರಣಿ ಆರ್.ವಿ.ದೇಶಪಾಂಡೆ ನೀಡಿರುವ ಬಹುಮಾನವನ್ನು ಎಸ್‌ಎಸ್‌ಎಲ್‌ಸಿಯಲ್ಲಿ ಪ್ರಥಮ ಸ್ಥಾನ ಪಡೆದ 4 ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಡಿ.ಡಿ.ಕಾಮತ, ಗಜಾನನ ಕಿಣಿ, ಡಾ.ವೆಂಕಟೇಶ ಶಾನಭಾಗ, ಭರತ ಭಂಡಾರ್ಕರ್, ರಾಮಕೃಷ್ಣ ಶಾನಭಾಗ ಗೋಳಿ, ಅನಂತ ಶಾನಭಾಗ, ಆರ್.ಎಚ್.ದೇಶಭಂಡಾರಿ, ಬಿ.ಎಸ್.ಗೌಡ, ಅಂಗ ಸಂಸ್ಥೆಗಳ ಮುಖ್ಯ ಶಿಕ್ಷಕರು, ಕಾಲೇಜಿನ ಪ್ರಾಂಶುಪಾಲರು, ವಿಧಾತ್ರಿ ಅಕಾಡೆಮಿಯ ಮುಖ್ಯಸ್ಥ ಗುರುರಾಜ ಶೆಟ್ಟಿ, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.