ಕಾರವಾರ: 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತ ಪ್ರತಿ ಮನೆಯಲ್ಲಿಯೂ ತ್ರಿವರ್ಣ ರಾರಾಜಿಸುತ್ತಿದೆ. ಅದರಂತೆ ಇಲ್ಲೊಂದು ಶಿವನ ದೇವಾಲಯದ ಗರ್ಭಗುಡಿಯೊಳಗೂ ತ್ರಿವರ್ಣ ಕಂಗೊಳಿಸುತ್ತಿದ್ದು ದೈವಭಕ್ತಿಯೊಂದಿಗೆ ರಾಷ್ಟ್ರ ಭಕ್ತಿಯೂ ಮೇಳೈಸುತ್ತಿದೆ.
ತಾಲೂಕಿನ ಶ್ರೀಕ್ಷೇತ್ರ ಶೇಜವಾಡದಲ್ಲಿನ ಶ್ರೀ ಶೆಜ್ಜೇಶ್ವರ ದೇವಸ್ಥಾನದಲ್ಲಿ ಸೋಮವಾರ ಈ ದೃಶ್ಯ ಕಂಡು ಬಂದಿದೆ. ಪುರಾಣ ಪ್ರಸಿದ್ಧ ಶಿವನ ಆತ್ಮಲಿಂಗದ ಭಾಗವೇ ಆಗಿರುವ ಶಿವನ ದೇವಾಲಯಕ್ಕೆ ಶ್ರಾವಣ ಸೋಮವಾರ ನಿಮಿತ್ತ ಹೆಚ್ಚಿನ ಭಕ್ತರು ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದು ಪೂಜೆ, ಅಭಿಷೇಕಗಳನ್ನು ಸಲ್ಲಿಸುತ್ತಾರೆ.
ಸೋಮವಾರದಂದೇ ಸ್ವಾತಂತ್ರ್ಯ ದಿನಾಚರಣೆಯೂ ಬಂದಿರುವುದರಿಂದ ದೇವಾಲಯದ ಅರ್ಚಕರು ಶಿವನ ಗರ್ಭಗುಡಿಯೊಳಗೆ ತ್ರಿವರ್ಣವನ್ನು ಕಂಗೊಳಿಸುವಂತೆ ಮಾಡಿದ್ದಾರೆ. ಶ್ರೀ ಶೇಜ್ಜೇಶ್ವರನ ಹಿಂಬದಿಯ ಗೋಡೆಗೆ ಕೇಸರಿ, ಬಿಳಿ ಹಾಗೂ ಹಸಿರು ಬಣ್ಣಗಳ ಬಟ್ಟೆಗಳನ್ನು ನೀಟಾಗಿ ಜೋಡಿಸಿಕೊಂಡು ಬಿಳಿ ಬಣ್ಣದಲ್ಲಿ ಅಶೋಕ ಚಕ್ರವನ್ನು ಚಿತ್ರಿಸಲಾಗಿದೆ. ದೇವಾಲಯಕ್ಕೆ ಆಗಮಿಸಿದ ಭಕ್ತರು ಈ ಅಪೂರ್ಣ ದೃಶ್ಯವನ್ನು ಕಣ್ತುಂಬಿಕೊಂಡು ತ್ರಿವರ್ಣ ಹಾಗೂ ಶ್ರೀ ಶೆಜ್ಜೇಶ್ವರನಿಗೆ ಭಕ್ತಿಯಿಂದ ನಮಿಸಿ ದೈವಭಕ್ತಿಯೊಂದಿಗೆ ರಾಷ್ಟ್ರ ಭಕ್ತಿಯನ್ನೂ ಮೆರೆಯುತ್ತಿದ್ದಾರೆ. ದೇವಸ್ಥಾನ ಆಡಳಿತ ಸಮಿತಿ ಹಾಗೂ ಅರ್ಚಕರ ಈ ಕಾರ್ಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.