ತಂಝೀಮ್ ವತಿಯಿಂದ ಇಂದು ಬೃಹತ್ ತಿರಂಗ ಬೈಕ್ ರ‍್ಯಾಲಿ

ಭಟ್ಕಳ: ದೇಶವು 75ನೇ ಸುವರ್ಣಮಹೋತ್ಸವ ಸಮಾರಂಭ ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಭಟ್ಕಳ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಸಂಸ್ಥೆಯು ಭಟ್ಕಳದ ಎಲ್ಲ ಸಮಾಜದವರೊಂದಿಗೆ ಸೇರಿ ಬೃಹತ್ ತಿರಂಗ ರ‍್ಯಾಲಿಯನ್ನು ಅ.15 ರ ಸಂಜೆ 4.30 ಗಂಟೆಗೆ ಆಯೋಜಿಸಿದೆ. ಇದರಲ್ಲಿ ಎಲ್ಲರೂ ಭಾಗವಹಿಸಬೇಕೆಂದು ತಂಝೀಮ್ ಮುಖಂಡ ಇನಾಯತುಲ್ಲಾ ಶಾಬಂದ್ರಿ ಹೇಳಿದ್ದಾರೆ.

ಸಂಜೆ 4.30ಕ್ಕೆ ಸಾಗರ ರಸ್ತೆಯ ಆನಂದಾಶ್ರಮ ಕಾನ್ವೆಂಟ್ ಶಾಲಾ ಮೈದಾನದಿಂದ ಆರಂಭಗೊಳ್ಳುವ ಈ ಬೃಹತ್ ಬೈಕ್ ರ‍್ಯಾಲಿ ಶಮ್ಸುದ್ದೀನ್ ವೃತ್ತದ ಮೂಲಕ ಮುಖ್ಯರಸ್ತೆಯಲ್ಲಿ ಸಂಚರಿಸಿ ಸುಲ್ತಾನ್ ಸ್ಟ್ರೀಟ್ ಮಾರ್ಗವಾಗಿ ಚೌಕ್ ಬಝಾರ್, ಮುಹಮ್ಮದ್ ಅಲಿ ರೋಡ್, ಹೂವಿನ ಪೇಟೆ, ಚನ್ನಪಟ್ಟಣ ಹನುಮಂತದೇವಸ್ಥಾನ ರಸ್ತೆ, ಕಾರ್ ಸ್ಟ್ರೀಟ್ ಮಾರ್ಗವಾಗಿ ಚಲಿಸಿ ತಾಲೂಕು ಕ್ರೀಡಾಂಗಣದ ಮೈದಾನದಲ್ಲಿ ಮುಕ್ತಾಯವಾಗಲಿದೆ.

ಅಲ್ಲಿ ಹಿಂದೂ-ಸಮುದಾಯದ ಪ್ರಮುಖರು ಆಜಾದಿ ಕಾ ಅಮೃತ ಮಹೋತ್ಸವ ಸಮಾರಂಭದ ಸಂದೇಶವನನು ನೀಡಲಿದ್ದಾರೆ. ರಾತ್ರಿ 9 ಗಂಟೆಗೆ ಹಳೆ ಬಸ್ ನಿಲ್ದಾಣ ಪಕ್ಕದಲ್ಲಿರುವ ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನು ಆಯೋಜಿಸಿದ್ದು, ಜಾಮಿಯಾ ಮಸೀದಿ ಚಿನ್ನದ ಪಳ್ಳಿಯ ಇಮಾಮ್ ಮತ್ತು ಖತೀಬ್ ಮೌಲಾನ ಅಬ್ದುಲ್ ಅಲೀಮ್ ಖತೀಬ್ ನದ್ವಿ ಹಾಗೂ ಅಲಿಮಿಯಾ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಮೌಲಾನ ಮುಹಮ್ಮದ್ ಇಲಿಯಾಸ್ ನದ್ವಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ಎರಡೂ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.