ಹರ್ ಘರ್ ತಿರಂಗಾ ಅಭಿಯಾನದ ತಿರಂಗ ಯಾತ್ರೆಗೆ ಚಾಲನೆ ಕೊಟ್ಟ ಕೋಟ ಶ್ರೀನಿವಾಸ ಪೂಜಾರಿ

ಕಾರವಾರ: ನಗರಸಭೆ ಕಚೇರಿಯ ಉದ್ಯಾನವನದ ಬಳಿ ಹರ್ ಘರ್ ತಿರಂಗಾ ಅಭಿಯಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಶನಿವಾರ ಚಾಲನೆ ನೀಡಿದರು. ಆರಂಭದಲ್ಲಿ ಉದ್ಯಾನವನದ ಮಹಾತ್ಮಾ ಗಾಂಧೀಜಿ ಪುತ್ಥಳಿಗೆ ಸಚಿವ ಕೋಟ, ಶಾಸಕಿ ರೂಪಾಲಿ ನಾಯ್ಕ, ಎಂಎಲ್ಸಿ ಗಣಪತಿ ಉಳ್ವೇಕರ್, ನಗರಸಭೆ ಅಧ್ಯಕ್ಷ ನಿತಿನ್ ಪಿಕಳೆ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾಲಾರ್ಪಣೆ ಮಾಡಿದರು.

ಬಳಿಕ ಮಾತನಾಡಿದ ಸಚಿವರು ಇಂದು ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ ಮಾಡುತ್ತಿರುವುದು ನಮ್ಮಲ್ಲರ ಸೌಭಾಗ್ಯವಾಗಿದೆ. ತ್ರಿವರ್ಣ ಧ್ವಜ ಹಾರಿಸುವ ಕಾರ್ಯಕ್ರಮ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದ್ಯಂತ ನಡೆಯುತ್ತಿದೆ. ಅದರ ಭಾಗವಾಗಿ ನಾವೆಲ್ಲ ತಿರಂಗಾ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದೇವೆ. ಮಹಾತ್ಮಾ ಗಾಂಧಿ ಇಲ್ಲಿಗೆ ಬಂದಿದ್ದು ಅವಿಸ್ಮರಣೀಯ ನೆನಪುಗಳು. ಮಹಾತ್ಮಾ ಗಾಂಧಿ ಪಾದಸ್ಪರ್ಶವಾದ ಈ ನೆಲೆದಲ್ಲಿ ತ್ರಿವರ್ಣ ಧ್ವಜವನ್ನು ಹಿಡಿದು ಮೆರವಣಿಗೆ ಮಾಡುತ್ತಿರುವುದು ನಮ್ಮ ಸುಯೋಗವಾಗಿದೆ. ನಾವೆಲ್ಲ ಇಂದು ಸ್ವಾತಂತ್ರ್ಯ ಅನುಭವಿಸುತ್ತಿದ್ದೇವೆ. ಪ್ರಪಂಚದ ಇತರೆ ರಾಷ್ಟ್ರಗಳಲ್ಲಿ ಪ್ರಜಾಪ್ರಭುತ್ವ ನಶಿಸಿ ಹೋಗುತ್ತಿರುವ ಸಂದರ್ಭದಲ್ಲಿ ಡಾ. ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಮೂಲಕ ದೃಢ ಹೆಜ್ಜೆಗಳನ್ನು ಇಡುತ್ತಿದ್ದೇವೆ. ಇದು ನಮಗೆ ಶಕ್ತಿಯಾಗಿದೆ ಎಂದು ಸಚಿವರು ಹೇಳಿದರು.

ಬಳಿಕ ನಗರಸಭೆ ಕಚೇರಿಯ ಹೊರ ಆವರಣದಲ್ಲಿ ತಿರಂಗಾ ಯಾತ್ರೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕಾರವಾರದ ಬಾಲ ಮಂದಿರ, ಹಿಂದೂ ಹೈಸ್ಕೂಲ್, ಸೇಂಟ್ ಜೋಸೆಫ್, ಸೇಂಟ್ ಮೈಕಲ್ ಸೇರಿದಂತೆ ಹಲವು ಖಾಸಗಿ, ಸರಕಾರಿ ಶಾಲೆಯ ನಾಲ್ಕು ಸಾವಿರಕ್ಕೂಅಧಿಕ ವಿದ್ಯಾರ್ಥಿಗಳು, ವಿವಿಧ ಇಲಾಖೆಯ ಅಧಿಕಾರಿ ವರ್ಗದವರು, ವಿವಿಧ ಸಂಘ ಸಂಸ್ಥೆ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು. ನಗರಸಭೆ ಕಚೇರಿ ಬಳಿಯಿಂದ ಆರಂಭಗೊಂಡ ಬೃಹತ್ ಮೆರವಣಿಗೆ ನಗರದ ಪ್ರಮುಖ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗಿ ತಿರಂಗಾ ಯಾತ್ರೆ ಯಶಸ್ವಿಗೊಳಿಸಿದರು.