ಸಿದ್ದಾಪುರ: ಕರ್ನಾಟಕದಲ್ಲಿ ಜಾರಿಗೊಳಿಸಲು ಹೊರಟಿರುವ ವಿದ್ಯುತಚಕ್ತಿ ಕಾಯಿದೆ ಜಾರಿಗೆ ಬರದಂತೆ ಚಳವಳಿ ನಡೆಸಬೇಕು ಎಂದು ರೈತ ಸಂಘದ ರಾಜಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಕರೆ ನೀಡಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಸಿದ್ದಾಪುರ ತಾಲೂಕಿನ ಐಗಳಕೊಪ್ಪ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಅಧ್ಯಯನ ಶಿಬಿರದಲ್ಲಿ ಮಾತನಾಡಿ, ರಾಜ್ಯದಲ್ಲಿ 40% ಸರ್ಕಾರ ಇದೆ ಎಂದು ಇಡಿ ದೇಶದಲ್ಲಿ ಸಾಬೀತಾಗಿರುವಾಗ ಕಾರ್ಯಾಂಗದ ಮೇಲೆ ವಿಶ್ವಾಸ ಇಡಲು ಹೇಗೆ ಸಾಧ್ಯ. ಚಳುವಳಿಗಳಿದ್ದರೆ ಮಾತ್ರ ಆರೋಗ್ಯಕರ ಪ್ರಜಾಪ್ರಭುತ್ವ ಇರಲು ಸಾಧ್ಯ. ಸರ್ಕಾರ ಚಳುವಳಿಯನ್ನು ಹತ್ತಿಕ್ಕಲು ತಂತ್ರ ನಡೆಸುತ್ತಿದೆ. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಖಾಸಗೀಯವರ ಪಾಲಾಗುತ್ತಿದೆ. ಕರ್ನಾಟಕದಲ್ಲಿ ವಿದ್ಯುತ್ ಶಕ್ತಿ ಕಾಯ್ದೆ ಜಾರಿಗೆ ಮುಂದಾಗಿದ್ದು, ಇದು ರೈತರಿಗೆ ತೊಂದರೆ ಉಂಟುಮಾಡಲಿದೆ. ರಾಜ್ಯದಲ್ಲಿ ಈ ಕಾಯ್ದೆ ಜಾರಿಗೊಳ್ಳದಂತೆ ಚಳವಳಿ ನಡೆಸಬೇಕು ಎಂದು ಹೇಳಿದರು.
ಈ ವೇಳೆ ತಾಳಗುಪ್ಪಾದ ಕುಡ್ಲಿಮಠದ ಶ್ರೀ ಸಿದ್ಧವೀರ ಸ್ವಾಮೀಜಿ, ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಮಂಜುನಾಥ ಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಳ್ಳಿ ಬೈರೇಗೌಡ, ತಾಲೂಕಾ ಅಧ್ಯಕ್ಷ ಕೆರಿಯಪ್ಪ ನಾಯ್ಕ, ರೈತ ಮುಖಂಡರಾದ ವೀರಭದ್ರ ನಾಯ್ಕ, ಜಾಕೀರ್ ದಾಸನಕೊಪ್ಪ, ಮಂಜುನಾಥ ಗೌಡ ಮತ್ತಿತರರು ಉಪಸ್ಥಿತರಿದ್ದರು.