ಕೃಷಿ ಮತ್ತು ತೋಟಗಾರಿಕಾ ಇಲಾಖೆಯ ಅಧಿಕಾರಿಗಳೊಂದಿಗೆ ರೈತರ ಸಂವಾದ

ಶಿರಸಿ: ನಗರದ ಅಂಬೇಡ್ಕರ್ ಸಭಾಭವನದಲ್ಲಿ ಶುಕ್ರವಾರ ತಾಲೂಕು ಪತ್ರಕರ್ತರ ಸಂಘ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳೊಂದಿಗೆ ರೈತರ ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಬನವಾಸಿ ಭಾಗದ ರೈತರು ಸಮಸ್ಯೆಗಳನ್ನು ಕೃಷಿ ಅಧಿಕಾರಿಗಳ ಹತ್ತಿರ ಹೇಳಿಕೊಂಡರು. ಈ ವೇಳೆ ಸಮಸ್ಯೆಗಳ ನಡುವೆ ಆದಾಯ ಕಂಡುಕೊಳ್ಳುವುದು ಹೇಗೆ ಎನ್ನುವುದರ ಬಗ್ಗೆ ಅಧಿಕಾರಿಗಳಿಂದ ಸಲಹೆ ಪಡೆದುಕೊಂಡರು.

ರೈತ ಸಿ ಎಫ್ ನಾಯ್ಕ ಅಧಿಕಾರಿಗಳೊಂದಿಗೆ ಮಾತನಾಡಿ, ಬನವಾಸಿ ಭಾಗದಲ್ಲಿ ಕೃಷಿ ಹಾನಿ ಜಾಸ್ತಿ ಇದೆ. ಸಚಿವರು ಸಹ ಇಲ್ಲಿ ಬಂದು ಹೋಗ್ತಿದ್ದಾರೆ. ಆದರೆ ಸೂಕ್ತ ಪರಿಹಾರ ಮಾತ್ರ ಸಿಗ್ತಾ ಇಲ್ಲ. ಈಗಾಗಲೇ 200 ಹೆಕ್ಟೇರ್ ಭತ್ತ ಬೆಳೆ ಹಾನಿಯಾಗಿದೆ. ಈ ಕುರಿತಂತೆ ಸೂಕ್ತ ಸರ್ವೇ ಮಾಡಿ ಪರಿಹಾರ ನೀಡಬೇಕು. ಭತ್ತ ಖರೀದಿಗೆ ಬೆಂಬಲ ಬೆಲೆ ಇನ್ನೂ ಸಿಗ್ತಿಲ್ಲ. ಬೆಂಬಲ ಬೆಲೆ ಘೋಷಿಸಿದ ದರವೂ ವೈಜ್ಞಾನಿಕವಾಗಿಲ್ಲ. ಇನ್ನದರೂ ಸೂಕ್ತ ಬೆಳೆ ನೀಡಬೇಕು ಎಂದು ಆಗ್ರಹಿಸಿದರು.

ರೈತರ ಪಾಲಿಗೆ ಕೇವಲ ಪೃಕೃತಿ ಮಾತ್ರ ಮುನಿಸಿಕೊಂಡಿಲ್ಲ. ಜನಪ್ರತಿನಿಧಿಗಳೂ ಸಹ ಮಾರ್ಗೊಪಾಯ ಕಂಡುಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ. ವರದಾ ನದಿ ಪ್ರವಾಹ ಪೀಡಿತ ಪ್ರದೇಶದ ರೈತರ ಸಾಲವನ್ನು ವಿಶೇಷ ಎಂದು ಪರಿಗಣಿಸಿ ಮನ್ನಾ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ರೈತ ಸಿ.ಬಿ. ಗೌಡ ಆಗ್ರಹಿಸಿದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಟರಾಜ ಮಾತನಾಡಿ, ಬೆಳೆ ವಿಮೆಯನ್ನು ಕಳೆದ 5 ವರ್ಷಗಳ ಸರಾಸರಿಯನ್ನು ಆಧರಿಸಿ ನೀಡಲಾಗುತ್ತದೆ. ರೈತರು ಬೆಳೆ ವಿಮೆ ಮಾಡಿಸುವ ಪ್ರಮಾಣ ನಮ್ಮ ತಾಲೂಕಿನಲ್ಲಿ ಕಡಿಮೆ ಇದೆ. ಎಲ್ಲ ರೈತರೂ ಈ ವ್ಯಾಪ್ತಿಗೆ ಬರುವಂತಾಗಬೇಕು ಎಂದರು.

ಬೆಳೆ ಹಾನಿಯ ಪರಿಹಾರವನ್ನು ಈಗ ರಾಜ್ಯ ಸರ್ಕಾರ ಪರಿಷ್ಕರಿಸಿದೆ. ತೋಟಗಾರಿಕಾ ಬೆಳೆಗಳಿಗೆ ಹೆಕ್ಟೇರ್‌ಗೆ 28 ಸಾವಿರಕ್ಕೆ ಏರಿಸಿದೆ. ಶುಂಠಿ ಬೆಳೆ ವಿಮೆ ವ್ಯಾಪ್ತಿಯಲ್ಲಿ ಇಲ್ಲ. ಬೇಡಿಕೆ ಇದ್ದರೆ ಶುಂಠಿ, ಮಾವನ್ನೂ ವ್ಯಾಪ್ತಿಯಲ್ಲಿ ಸೇರಿಸುತ್ತೇವೆ ಎಂದು ತೋಟಗಾರಿಕೆ ಇಲಾಖೆ ನಿರ್ದೇಶಕ ಪಿ ಬಿ ಸತೀಶ ಹೇಳಿದರು.

ಈ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಮಧುಕರ ನಾಯ್ಕ, ತೋಟಗಾರಿಕೆ ಇಲಾಖೆಯ ಗಣೇಶ ಹೆಗಡೆ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸಂದೇಶ ಭಟ್, ಕಾರ್ಯದರ್ಶಿ ಕೃಷ್ಣಮೂರ್ತಿ ಕೆರೆಗದ್ದೆ ರಾಘವೇಂದ್ರ ಬೆಟ್ಟಕೊಪ್ಪ ಹಾಗೂ ರೈತರು ಉಪಸ್ಥಿತರಿದ್ದರು.