ಜೋಯಿಡಾ: ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಅವುರ್ಲಿ ಗ್ರಾಮದ ರೈತರ ಮುಖ್ಯ ರೈತ ಸಂಪರ್ಕ ರಸ್ತೆ ಹಾಗೂ ಅಂಗನವಾಡಿ, ಶಾಲೆ,ದೇವಸ್ಥಾನದ ಸಂಪರ್ಕ ಕೊಂಡಿಯಾಗಿರುವ ಹಾಗೂ ಗ್ರಾಮದ ಕೇಂದ್ರ ಸ್ಥಾನದ ರಸ್ತೆ, ನಂದಿಗದ್ದೆ ಪಂಚಾಯತ ವ್ಯಾಪ್ತಿಯ ಕಚೇರಿ,ಬ್ಯಾಂಕ್,ಅಂಚೆ ಇಲಾಖೆಯ,ಪಡಿತರ ವಸ್ತುಗಳನ್ನು ತರಲು ಸಂಬಂಧಿಸಿದ ಕೆಲಸಗಳಿದ್ದರೆ ಸದರಿ ರಸ್ತೆಯು ಮುಖ್ಯ ರಸ್ತೆಯಾಗಿದೆ.
ದಾಂಡೇಲಿ – ಪೊಟೋಲಿ – ಅವುರ್ಲಿ ಒಳ ಮಾರ್ಗದಲ್ಲಿ ಸಾಮಗ್ರಿಗಳನ್ನು ಸರಬರಾಜು ಮಾಡಲು ಬರುವವರಿಗೆ ಬೈಪಾಸ್ ರಸ್ತೆಯಾಗಿದೆ. ಅವುರ್ಲಿ – ದಾಬೇ ಒಳ ರೈತ ಸಂಪರ್ಕ ರಸ್ತೆಯ ಉದ್ದ ಅಂದಾಜು 2.200 ಕಿಮೀ ಇರುತ್ತಿದ್ದು,ಸದರಿ ರಸ್ತೆಯ 1.200 ಕಿಮೀ ರಸ್ತೆಯನ್ನು 2023ರಲ್ಲಿ ಕಾಂಕ್ರೀಟ್ ರಸ್ತೆಯನ್ನಾಗಿ ಮಾಡಲಾಗಿದೆ. ಇನ್ನೂ ಉಳಿದಿರುವ 1 ಕಿಮೀ ರಸ್ತೆಯು ಭಾರಿ ಮಳೆಯ ಕಾರಣ ಕೆಸರು ಗದ್ದೆಯ ರೀತಿಯಲ್ಲಿ ರಾಡಿಯಾಗಿರುವುದರಿಂದ ವಾಹನ ಸವಾರರು ದಿನನಿತ್ಯ ಪರದಾಡುವಂತಾಗಿದೆ. ರೈತರ ದಿನ ನಿತ್ಯದ ದಿನಸಿ ಸಾಮಾನು, ಪಡಿತರ ವಸ್ತುಗಳು, ಕೃಷಿ ಪರಿಕರಗಳನ್ನು ಸಾಗಿಸಲು ತುಂಬಾ ತೊಂದರೆಯಾಗುತ್ತಿದೆ.
ಎಲ್ಲಾ ಚಟುವಟಿಕೆಗಳ ದೃಷ್ಟಿಯಿಂದ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಉಳಿದ ರೈತ ಸಂಪರ್ಕ ರಸ್ತೆಯನ್ನು ಸಂಬಂಧಿಸಿದ ಆಡಳಿತ ವ್ಯವಸ್ಥೆಯವರು ಗ್ರಾಮಸ್ಥರ,ಶಾಲಾ ಮಕ್ಕಳ,ವಾಹನ ಸವಾರರ,ವಾಹನಗಳ ಸುರಕ್ಷತೆಯ ದೃಷ್ಟಿಯಿಂದ ವಿಶೇಷ ಗಮನ ಹರಿಸಿ ಸರ್ವ ಋತು ರಸ್ತೆಯನ್ನಾಗಿ ಮಾಡಬೇಕೆಂದು ಗ್ರಾಮಸ್ಥರು ಮಾಧ್ಯಮದ ಮೂಲಕ ಮನವಿ ಮಾಡಿದ್ದಾರೆ.