ಜೋಯಿಡಾ : ಯಾವುದೇ ಸರಕಾರದ ಯೋಜನೆಗಳು ಬಂದಾಗ ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಫಲಾನುಭವಿಗಳಿದ್ದರೂ ಎಲ್ಲರನ್ನೂ ಫಲಾನುಭವಿಗಳನ್ನಾಗಿ ಗುರುತಿಸಿದರೆ ಯಾರಿಗೆ ಯೋಜನೆಗಳು ತಲುಪಬೇಕೊ ಅವರಿಗೆ ತಲುಪುವುದಿಲ್ಲ ಎಂದು ಬಿಜೆಪಿ ಧುರೀಣ ಎನ್.ವಿ.ಹೆಗಡೆ ಹೇಳಿದರು.
ಅವರು ಬುಧವಾರ ತಾಲೂಕಿನ ನಂದಿಗದ್ದೆಯಲ್ಲಿ ನಮ್ಮ ಸಂಕಲ್ಪ ವಿಕಸಿತ ಭಾರತ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಬಡವರಿಗೆ ಬಂದ ಯೋಜನೆಗಳನ್ನು ಸರಕಾರದ ಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಗಮನಿಸಿ ಅರ್ಹರಿಗೆ ಯೋಜನೆಗಳು ತಲುಪುವಲ್ಲಿ ಸಹಕರಿಸಬೇಕು. ಯೋಜನೆಗಳು ಬಂದಾಗ ಎಲ್ಲರೂ ಅದರ ಹಿಂದೆ ಓಡುತ್ತಾರೆ, ಆದರೆ ಯಾರಿಗೆ ಅಗತ್ಯವೋ ಅವರಿಗೆ ಅದು ತಲುಪಬೇಕು. ಉಳ್ಳವರು ಯೋಜನೆಯ ಲಾಭ ಪಡೆದು ಇಲ್ಲದವರಿಗೆ ಅನ್ಯಾಯ ಮಾಡುವಂತಹ ಕಾರ್ಯವಾಗಬಾರದು. ಕೇಂದ್ರ ಸರ್ಕಾರದ ಯೋಜನೆಯ ಲಾಭವನ್ನು ಸಾಕಷ್ಟು ಜನ ಪಡೆದಿದ್ದಾರೆ. ಕೇಂದ್ರದ ಸಾಧನೆ ಸಾಕಷ್ಟು ಇದ್ದು, ದೇಶದ ಅಭಿವೃದ್ಧಿಗೆ ಈ ಸರಕಾರ ಚಿಂತನೆ ನಡೆಸಿದೆ. ಕೇಂದ್ರದ ಕೆಲವು ಗಟ್ಟಿ ನಿರ್ಧಾರದಿಂದ ನಮ್ಮ ದೇಶ ಉತ್ತಮ ಸ್ಥಿತಿಯಲ್ಲಿದೆ. ಎಲ್ಲವನ್ನೂ ಪಡೆಯುತ್ತಿರುವ ನಾವು ದೇಶಕ್ಕಾಗಿ ಏನಾದರೂ ಮಾಡಲೇ ಬೇಕು. ಕೇಂದ್ರ ಸರಕಾರದ ಜೊತೆ ಕೈ ಜೋಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದು ಮಾಹಿತಿ ನೀಡಿದರು. ಜೊಯಿಡಾ ಕೆನರಾ ಬ್ಯಾಂಕ್ ವ್ಯವಸ್ಥಾಪಕ ಶ್ರೀಧರ್ ನಾಯ್ಕ , ಗುಂದ ಕ. ವಿ. ಗ್ರಾ.ಬ್ಯಾಂಕ್ ವ್ಯವಸ್ಥಾಪಕ ಸುನೀಲ್ , ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಲ್ಪನಾ, ಆರೋಗ್ಯ ಇಲಾಖೆಯ ಅಧಿಕಾರಿಗಳು ಸೂಕ್ತ ಮಾಹಿತಿ ಒದಗಿಸಿದರು.
ಕೇಂದ್ರ ಸರಕಾರದ ಹಲವಾರು ಮಾಹಿತಿ ಒದಗಿಸುವ ಮಾಹಿತಿಯನ್ನು ಎಲ್.ಇ.ಡಿ ಪರದೆಯ ಪ್ರದರ್ಶನ ಮಾಡಲಾಯ್ತು. ಡ್ರೋನ್ ಹಾರಾಟ ಮಾಡಿ ಮಾಹಿತಿಗಳನ್ನು ಒದಗಿಸಲಾಯಿತು.