ಜೋಯಿಡಾ: ತಾಲೂಕಿನ ಸೂಪಾ ಜಲಾಶಯದಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸಹಾಯಕ ಅಯುಕ್ತರಾದ ಡಾ.ಕನಿಷ್ಕ ಅಧ್ಯಕ್ಷತೆಯಲ್ಲಿ ಜೋಯಿಡಾ, ಕಾರವಾರ ಮತ್ತು ದಾಂಡೇಲಿ ತಾಲೂಕಿನ ಅಧಿಕಾರಿಗಳು ಮತ್ತು ಕೆಪಿಸಿಯ ಅಧಿಕಾರಿಗಳ ಜೊತೆ ಗಣೇಶಗುಡಿಯಲ್ಲಿ ಶನಿವಾರ ಸಭೆಯನ್ನು ನಡೆಯಿತು.
ಸೂಪಾ ಜಲಾಶಯ ಭರ್ತಿಯಾಗಿ ನೀರು ಹೊರಕ್ಕೆ ಬಿಟ್ಟಾಗ ಜಲಾಶಯದ ಕೆಳ ಸ್ತರದ ಗ್ರಾಮಗಳಲ್ಲಿ ವಾಸಿಸುವ ಜನ, ಜಾನುವಾರಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಲು ಕೈಗೊಳ್ಳಬೇಕಾದ ಕ್ರಮಗಳು ಮತ್ತು ಈ ಬಗ್ಗೆ ಜಾಗೃತಿ ಮೂಡಿಸುವುದು. ಜಲಾಶಯದಿಂದ ಎಷ್ಟು ಕ್ಯೂಸೆಕ್ಸ್ ನೀರು ಹೊರಬಿಟ್ಟಾಗ ಯಾವ, ಯಾವ ಗ್ರಾಮಗಳ ಮೇಲೆ ಇದರ ಪರಿಣಾಮ ಬೀರಬಹುದು. ಜಲಾಶಯದ ಹಿನ್ನೀರು ಪ್ರದೇಶವಾದ ಜೊಯಿಡಾ ತಾಲೂಕಿನ ಯಾವ, ಯಾವ ಗ್ರಾಮಗಳ ಸಂಪರ್ಕ ಕಡಿತಗೊಳ್ಳಲಿದೆ, ಸಂಪರ್ಕಕ್ಕೆ ಏನೆಲ್ಲಾ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕಾಗಬಹುದು ಎನ್ನುವುದರ ಬಗ್ಗೆ ಜೊಯಿಡಾ ತಹಶೀಲ್ದಾರ್ ಮಂಜುನಾಥ ಮುನ್ನೊಳ್ಳಿ ಮಾಹಿತಿ ನೀಡಿದರು.
ಸಭೆಯಲ್ಲಿ ಗಣೇಶಗುಡಿ ಕೆಪಿಸಿಯ ಕಾರ್ಯನಿರ್ವಾಹಕ ಅಭಿಯಂತರರಾದ ಅಶೋಕ್ ಕುಮಾರ್ ಎಚ್.ಎಸ್ ಜಲಾಶಯದ ಸಂಪೂರ್ಣ ಮಾಹಿತಿಯನ್ನು ನೀಡಿದರು.
ಸಹಾಯಕ ಆಯುಕ್ತರಾದ ಡಾ.ಕನಿಷ್ಕ ಮಾತನಾಡಿ, ವ್ಯಾಪಕವಾಗಿ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಸಂದರ್ಭದಲ್ಲಿ ಸೂಪ ಜಲಾಶಯ ಭರ್ತಿಯಾದ ಪಕ್ಷದಲ್ಲಿ ನೀರನ್ನು ಹೊರ ಬಿಡಬೇಕಾಗಿರುತ್ತದೆ. ನೀರನ್ನು ಹೊರ ಬಿಡುವಂತಹ ಸಂದರ್ಭದಲ್ಲಿ ಆಗಬಹುದಾದ ಸಮಸ್ಯೆಗಳ ಬಗ್ಗೆ ಮೊದಲೇ ತಿಳಿದು ಸಮಸ್ಯೆಗಳಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದರು.