ಜೋಯಿಡಾ : ಬೆಳಗಾವಿ- ಗೋವಾ ರಾಷ್ಟ್ರೀಯ ಹೆದ್ದಾರಿ ಎನ್ಎಚ್ 748 ರಾಮನಗರದ ಅಸ್ತೋಲಿ ಸೇತುವೆಯ ಮೇಲಿನ ರಸ್ತೆಯಲ್ಲಿ ಹೊಂಡಗುಂಡಿಗಳು ಬಿದ್ದಿದ್ದು ಸಂಚಾರ ಅಸ್ತವ್ಯಸ್ತವಾಗಿದೆ. ಈ ಬಗ್ಗೆ ಆಡಳಿತ ಯಂತ್ರದ ಕಳಪೆ ಕಾಮಗಾರಿ ಎಂದು ಮೊರ್ಯ ಮಿತ್ರ ಮಂಡಳಿ ಮತ್ತು ಮಣಿಕಂಠ ಸೇವಾ ಸಂಘದ ಸದಸ್ಯರು ರಸ್ತೆಯ ಹೊಂಡದಲ್ಲಿ ಗಿಡ ನೆಟ್ಟು ಕೆಲ ಕಾಲ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿ ಶೀಘ್ರ ರಸ್ತೆ ಕಾಮಗಾರಿಯ ಸರಿಪಡಿಸುವಿಕೆಯ ಬಗ್ಗೆ ಆಡಳಿತ ಯಂತ್ರ ಗಮನಹರಿಸಬೇಕೆಂದು ಆಗ್ರಹಿಸಿದ್ದಾರೆ.
ಕಳೆದ ಎಂಟು ವರ್ಷಗಳಿಂದ ಈ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು ರಾಮನಗರ – ಅನಮೋಡವರೆಗಿನ ರಸ್ತೆ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ. ಮಳೆಗಾಲದಲ್ಲಿ ರಸ್ತೆಯಲ್ಲಿ ಸುಗಮ ಸಂಚಾರ ಮಾಡಲು ಕೆಲವು ಕಡೆಗಳಲ್ಲಿ ಡಾಂಬರೀಕರಣ ಮಾಡಲಾಗಿತ್ತು,ಆದರೆ ಮೊದಲ ಮಳೆಗಾಲದಲ್ಲೇ ರಸ್ತೆಯ ಮೇಲಿನ ಡಾಂಬರು ಸಂಪೂರ್ಣ ಕಿತ್ತು ಹೋಗಿದ್ದು ದೊಡ್ಡ – ದೊಡ್ಡ ಹೊಂಡಗಳು ಬಿದ್ದಿವೆ. ದ್ವಿಚಕ್ರ ವಾಹನ ಹಾಗೂ ದೊಡ್ಡ ವಾಹನಗಳು ಸಿಕ್ಕಿಕೊಂಡು ವಾಹನಗಳಿಗೆ,ಸವಾರರಿಗೆ ತೀವ್ರ ತೊಂದರೆಯಾಗುತ್ತಿದೆ.ಅಪಘಾತಗಳ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.ಕೇಂದ್ರ ಸಂಚಾರ ಪ್ರಾಧಿಕಾರ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸ್ಪಷ್ಟ ನಿರ್ಲಕ್ಷದಿಂದ ಈ ರಸ್ತೆಯ ನಿರ್ವಹಣೆ ಸರಿಯಾಗಿ ಮಾಡಿಲ್ಲದ ಕಾರಣ ಈ ರಸ್ತೆಯ ಇಂತಹ ದುಸ್ಥಿತಿಗೆ ತಲುಪಿದೆ ಎಂದು ಈ ಸಂದರ್ಭದಲ್ಲಿ ಆರೋಪಿಸಿದರು.ಆದಷ್ಟು ಬೇಗ ರಸ್ತೆ ಕಾಮಗಾರಿ ಪೂರ್ಣ ಗೊಳಿಸಲು ಸಂಬಂಧ ಪಟ್ಟ ಇಲಾಖೆಯವರು ಗಮನ ಹರಿಸಬೇಕೆಂದು ಮೋರ್ಯ ಮಿತ್ರ ಮಂಡಳಿ ಮತ್ತು ಮಣಿಕಂಠ ಸೇವಾ ಸಂಘದ ಕಾರ್ಯಕರ್ತರು ಆಗ್ರಹಿಸಿದ್ದಾರೆ.