ಹರ್ ಘರ್ ತಿರಂಗ ಅಭೂತಪೂರ್ವ ಬೆಂಬಲ: ವೈಯಕ್ತಿಕ ಹಣದಲ್ಲಿ 34 ಸಾವಿರ ಧ್ವಜ ವಿತರಣೆ ಮಾಡಿದ ಶಾಸಕಿ ರೂಪಾಲಿ

ಕಾರವಾರ: ಹರ್ ಘರ್ ತಿರಂಗ ಕಾರ್ಯಕ್ರಮದಡಿ ಶಾಸಕಿ ರೂಪಾಲಿ ಎಸ್.ನಾಯ್ಕ ಕಾರವಾರ ಹಾಗೂ ಅಂಕೋಲಾ ತಾಲೂಕಿನಲ್ಲಿ ಮನೆ ಮನೆಗೆ ತೆರಳಿ ಧ್ವಜ ವಿತರಣಾ ಅಭಿಯಾನಕ್ಕೆ ಭಾರಿ ಬೆಂಬಲ ವ್ಯಕ್ತವಾಗಿದೆ. ತಮ್ಮ ವೈಯಕ್ತಿಕ ಹಣದಲ್ಲಿ 34 ಸಾವಿರ ಧ್ವಜಗಳನ್ನು ಮನೆ ಮನೆಗೆ ಉಚಿತವಾಗಿ ವಿತರಿಸಲು ನೀಡಿದ್ದಾರೆ.

ಕಾರವಾರ ಹಾಗೂ ಅಂಕೋಲಾ ತಾಲೂಕಿನ ಎಲ್ಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಂಚರಿಸಿದ ರೂಪಾಲಿ ಎಸ್.ನಾಯ್ಕ ಸಾಂಕೇತಿಕವಾಗಿ ಕೆಲವು ಮನೆಗಳಿಗೆ ತೆರಳಿ ರಾಷ್ಟ್ರಧ್ವಜವನ್ನು ವಿತರಿಸಿದರು. ಉಳಿದ ಎಲ್ಲ ಮನೆಗಳಿಗೆ ವಿತರಿಸಲು ಗ್ರಾಪಂ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಹಸ್ತಾಂತರಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ರೂಪಾಲಿ ಎಸ್.ನಾಯ್ಕ, ಎಲ್ಲರಿಗೂ ದೇಶ ಮುಖ್ಯ. ದೇಶ ಇದ್ದರೆ ಮಾತ್ರ ನಾವು. ರಾಷ್ಟ್ರಪ್ರೇಮ, ಜಾಗೃತಿ ಸದಾ ಇರಬೇಕು. ಮನೆ ಮನೆಯಲ್ಲೂ ಧ್ವಜಾರೋಹಣ ನೆರವೇರಿಸುವ ಅವಕಾಶವನ್ನು ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಒದಗಿಸಿಕೊಟ್ಟಿದ್ದಾರೆ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ನನ್ನ ಕ್ಷೇತ್ರದ ಕೊಡುಗೆ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತದ್ದು. ಅಂಥಹ ಮಹಾನುಭಾವರ ತ್ಯಾಗ, ಬಲಿದಾನವನ್ನು ಸ್ಮರಿಸಿ, ಮನೆ ಮನೆಯಲ್ಲೂ ಧ್ವಜಾರೋಹಣ ನಡೆಸಿ ಸ್ವಾತಂತ್ರ್ಯದ ಅಮೃತಮಹೋತ್ಸವವನ್ನು ಸಂಭ್ರಮದಿಂದ ಆಚರಿಸಬೇಕಾಗಿದೆ ಎಂದು ಹೇಳಿದರು.

ಕೇವಲ ಸಚಿವರು, ಸಂಸದರು, ಶಾಸಕರು ಧ್ವಜಾರೋಹಣ ನಡೆಸುವುದಷ್ಟೇ ಅಲ್ಲ, ಈ ದೇಶದ ಪ್ರತಿ ಪ್ರಜೆಯೂ ಧ್ವಜಾರೋಹಣ ನಡೆಸುವಂತಾಗಬೇಕು. ಈ ಮೂಲಕ ದೇಶಪ್ರೇಮವನ್ನು ಇನ್ನಷ್ಟು ಗಟ್ಟಿಗೊಳಿಸಬೇಕು ಎನ್ನುವ ಸಂಕಲ್ಪದೊಂದಿಗೆ ಹರ್ ಘರ್ ತಿರಂಗ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಮನೆ ಮನೆ ಎದುರು ಆಗಸ್ಟ್ 13ರಂದು ಮುಂಜಾನೆ ಧ್ವಜಾರೋಹಣ ನೆರವೇರಿಸಿ ಆಗಸ್ಟ್ 15ರಂದು ಸಂಜೆ ಧ್ವಜವನ್ನು ಇಳಿಸಬೇಕು. ರಾಷ್ಟ್ರಧ್ವಜಕ್ಕೆ ಎಲ್ಲಿಯೂ ಅವಮಾನ ಆಗದಂತೆ ಎಚ್ಚರಿಕೆ ವಹಿಸಬೇಕು. ಈ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ವಿನಂತಿಸಿದರು.

ಕ್ಷೇತ್ರದ ಎಲ್ಲ ಗ್ರಾಪಂಗಳ ಅಧ್ಯಕ್ಷರು, ಸದಸ್ಯರು, ಪಕ್ಷದ ಕಾರ್ಯಕರ್ತರು, ಪದಾಧಿಕಾರಿಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಮತ್ತಿತರರು ಈ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕಾರವಾರ ನಗರ ಮಂಡಲ ಅಧ್ಯಕ್ಷರಾದ ಶ್ರಿ ನಾಗೇಶ್‌ ಕುರ್ಡೇಕರ, ಗ್ರಾಮೀಣ ಮಂಡಲದ ಶ್ರೀ ಸುಭಾಷ್ ಗುನಗಿ, ಅಂಕೋಲಾ ಮಂಡಲ‌ ಅಧ್ಯಕ್ಷರಾದ ಶ್ರೀ ಸಂಜಯ ನಾಯ್ಕ, ಜಿಲ್ಲಾ ಪ್ರಮುಖರಾದ ಜಗದೀಶ ನಾಯಕ, ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗಿಯಾಗಿದ್ದರು.

ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಹರ್ ಘರ್ ತಿರಂಗ ಅಭಿಯಾನದ ಅಡಿಯಲ್ಲಿ ಮನೆ ಮನೆಗೂ ರಾಷ್ಟ್ರಧ್ವಜ ತಲುಪಿಸುವ ಈ ಅವಕಾಶ ದೊರೆತಿರುವುದು ಸಂತಸ ತಂದಿದೆ. ನಾನು ಹೋದಲೆಲ್ಲ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹರ್ ಘರ್ ತಿರಂಗ ನನ್ನ ಕ್ಷೇತ್ರದಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಲಿದೆ ಎಂಬ ವಿಶ್ವಾಸ ಇದೆ. ಇದಕ್ಕಾಗಿ ಕೈಜೋಡಿಸುವಂತೆ ಎಲ್ಲರನ್ನೂ ವಿನಂತಿಸುತ್ತೇನೆ.

– ರೂಪಾಲಿ ಎಸ್.ನಾಯ್ಕ
ಶಾಸಕರು, ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರ.