ಕಾರವಾರ: ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಸಂಬಂಧಪಟ್ಟ ಯೋಜನೆಗಳಾದ ವ್ಯಾಕ್ಸಿನೇಷನ್, ಆರ್.ಬಿ.ಎಸ್.ಕೆ, ಕುಟುಂಬ ಯೋಜನೆ ಎಲ್ಲದರಲ್ಲೂ ಪ್ರಗತಿ ಸಾಧಿಸುತ್ತಾ ಇದ್ದು, ಇದೇ ರೀತಿಯಾಗಿ ಮುಂದುವರಿಯಲಿ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಂ. ಹೇಳಿದರು.
ವಿಶ್ವ ಜನಸಂಖ್ಯಾ ದಿನಾಚರಣೆ 2021-22ನೇ ಸಾಲಿನ ಕುಟುಂಬ ಕಲ್ಯಾಣ ಕಾರ್ಯಕ್ರಮದಡಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಉತ್ತಮ ಸಾಧನೆ ಕೈಗೊಂಡ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು ಹಾಗೂ ಆಶಾಗಳನ್ನು ಸನ್ಮಾನಿಸುವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಕೋವಿಡ್ ಹಾಗೂ ಇನ್ನಿತರ ಕಾರಣಗಳಿಂದ ಕುಟುಂಬ ಕಲ್ಯಾಣ ಯೋಜನೆಯ ಪ್ರಗತಿಯಲ್ಲಿ ಹಿನ್ನಡೆಯಾಗಿದ್ದರೂ ಸಹ, ಆರೋಗ್ಯ ಇಲಾಖೆಯ ಕುಟುಂಬ ಕಲ್ಯಾಣ ಯೋಜನೆಯ ಅರಿವು ಕಾರ್ಯಕ್ರಮಗಳಿಂದ ಈ ವರ್ಷ ಪ್ರಗತಿ ಕಾಣುತ್ತಿದೆ.
ಸಾರ್ವಜನಿಕರಲ್ಲಿ ಮೊದಲನೇ ಹಂತದಲ್ಲಿಯೇ ಆಶಾ ಮತ್ತು ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು ಕುಟುಂಬ ಕಲ್ಯಾಣ ಯೋಜನೆಯ ಅರಿವು ಮೂಡಿಸಬೇಕು. ಅರಿವು ಮೂಡಿಸಿದಂತಹ ಅಧಿಕಾರಿಗಳಿಗೆ ಹಾಗೂ ಆಶಾ ಕಾರ್ಯಕರ್ತರಿಗೆ ಸನ್ಮಾನ ಮಾಡಿ ಅವರನ್ನು ಪ್ರೋತ್ಸಾಹಿಸುವ ಕಾರ್ಯವಾದಾಗ ಇನ್ನು ಹೆಚ್ಚಿನ ಪ್ರಗತಿ ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕುಟುಂಬ ಕಲ್ಯಾಣ ಯೋಜನೆಯಡಿಯಲ್ಲಿ ಸಾಧನೆ ಮಾಡಿದ ಆಶಾಗಳಿಗೆ ಹಾಗೂ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳಿಗೆ ಜಿಲ್ಲಾ ಮಟ್ಟದಲ್ಲಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶರದ್ ನಾಯಕ್, ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ. ರಮೇಶ್ ರಾವ್, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಅನ್ನಪೂರ್ಣ ವಸ್ತಂದ, ತಾಲೂಕಾ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ವೃಂದಾ ಥಾಮಸೆ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಸವರಾಜ ಎನ್ ಕನ್ನಕ್ಕನವರ, ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.