ಶಿರಸಿ: ತಾಲೂಕಿನಲ್ಲಿ ಒಂದೆಡೆ ಗಾಳಿಮಳೆಗೆ ಅಡಕೆ ಮರಗಳು ಸಾಲಾಗಿ ಮುರಿದುಬೀಳುತ್ತಿವೆ. ಇನ್ನೊಂದೆಡೆ ನೆಗ್ಗು ಗ್ರಾಮ ಪಂಚಾಯಿತಿಯ ಮರ್ಲಮನೆಯಲ್ಲಿ ಮಂಗಗಳು ತೋಟದಲ್ಲಿ ದಾಳಿ ನಡೆಸಿ ಅಡಕೆ ಮಿಳ್ಳೆಗಳನ್ನು ತಿನ್ನತೊಡಗಿದ್ದು, ರೈತರನ್ನು ಕಂಗಾಲಾಗಿಸಿದೆ.
ಇತ್ತೀಚಿನ ವರ್ಷಗಳಲ್ಲಿ ಕೆಂಪು ಮೂತಿಯ ಮಂಗಗಳ ಹಾವಳಿ ಈ ಭಾಗದಲ್ಲಿ ತೀವ್ರಗೊಂಡಿದೆ. ಆರಂಭದಲ್ಲಿ ಬಾಳೆ ಗೊನೆಗಳನ್ನು ತಿನ್ನುತ್ತಿದ್ದ ಮಂಗಗಳು, ಕಳೆದ ಒಂದು ವರ್ಷದಿಂದ ಎಳೆ ಅಡಕೆ ಮಿಳ್ಳೆಗಳನ್ನು ತಿನ್ನಲಾರಂಭಿಸಿದೆ. ಮರ್ಲಮನೆ ಗ್ರಾಮದಲ್ಲಿ 7 ಮನೆಗಳಿದ್ದು, ಬಹುತೇಕ ಎಲ್ಲರ ಮನೆ ಅಡಕೆ ತೋಟದಲ್ಲಿಯೂ ಮಂಗಗಳು ಅಡಕೆಯನ್ನು ತಿಂದು ಹಾಕಿದೆ.
ಹಂದಿಗಳ ಕಾಟದಿಂದ ಅಡಕೆ ಗಿಡಗಳು ಸತ್ತರೆ ಅರಣ್ಯ ಇಲಾಖೆ ಪರಿಹಾರ ನೀಡುವುದಾಗಿ ತಿಳಿಸುತ್ತದೆ. ಆದರೆ, ಮಂಗಗಳಿಂದಾದ ಹಾನಿಗೆ ಪರಿಹಾರ ನೀಡುವವರಿಲ್ಲ. ಅರಣ್ಯ ಇಲಾಖೆ ಈ ಮಂಗಗಳನ್ನು ಹಿಡಿಸಿ ಬೇರೆಡೆ ಸಾಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಮಂಗಗಳ ಕಾವಲಿಗೆ ಸಂಪೂರ್ಣ ದಿನ ವ್ಯಯವಾಗುತ್ತಿದೆ. ನಾವು ತೋಟಕ್ಕೆ ಬರುತ್ತಿರುವುದನ್ನು ಕಂಡೊಡನೆ ಮಂಗಗಳು ಅಡಕೆ ಮರದ ಎಲೆಗಳ ಮಧ್ಯೆ ಅಡಗಿ ಕುಳಿತುಕೊಳ್ಳುತ್ತವೆ. ಅಡಕೆ ಗೊನೆ ಪೂರ್ಣ ಖಾಲಿಯೇ ಮಾಡುತ್ತಿವೆ.
– ರೈತ ವಿನಾಯಕ ಹೆಗಡೆ