ಬಾಬರ್ ಆಝಂ ದಾಖಲೆ ಉಡೀಸ್: ರೋಹಿತ್ ಶರ್ಮಾ ವಿಶ್ವದ ನಂಬರ್ 1 ಕ್ಯಾಪ್ಟನ್

T20 World Cup 2024: ಟಿ20 ವಿಶ್ವಕಪ್​ನ ಎರಡನೇ ಸೆಮಿಫೈನಲ್​ನಲ್ಲಿ ಟೀಮ್ ಇಂಡಿಯಾವನ್ನು ಯಶಸ್ವಿಯಾಗಿ ಮುನ್ನಡೆಸಿರುವ ನಾಯಕ ರೋಹಿತ್ ಶರ್ಮಾ ವಿಶೇಷ ವಿಶ್ವ ದಾಖಲೆ ಬರೆದಿದ್ದಾರೆ. ಅದು ಕೂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ತಂಡದ ನಾಯಕ ಬಾಬರ್ ಆಝಂ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.

ಅಂದರೆ ಇಂಗ್ಲೆಂಡ್ ವಿರುದ್ಧದ ಗೆಲುವಿನೊಂದಿಗೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನ ಅತ್ಯಂತ ಯಶಸ್ವಿ ನಾಯಕನೆಂಬ ಹಿರಿಮೆಯನ್ನು ರೋಹಿತ್ ಶರ್ಮಾ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ವಿಶ್ವ ದಾಖಲೆ ದಾಖಲೆ ಬಾಬರ್ ಆಝಂ ಹೆಸರಿನಲ್ಲಿತ್ತು.

ಬಾಬರ್ ಆಝಂ ನಾಯಕತ್ವದಲ್ಲಿ ಪಾಕಿಸ್ತಾನ್ ತಂಡವು 85 ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದಿದೆ. ಈ ವೇಳೆ ಪಾಕ್ ಪಡೆ 48 ಮ್ಯಾಚ್​ಗಳಲ್ಲಿ ಜಯ ಸಾಧಿಸಿದೆ. ಈ ಮೂಲಕ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತೀ ಹೆಚ್ಚು ಗೆಲುವು ಕಂಡ ನಾಯಕ ಎನಿಸಿಕೊಂಡಿದ್ದರು.

ಇದೀಗ ಈ ದಾಖಲೆಯನ್ನು ಮುರಿಯುವಲ್ಲಿ ರೋಹಿತ್ ಶರ್ಮಾ ಯಶಸ್ವಿಯಾಗಿದ್ದಾರೆ. ಹಿಟ್​ಮ್ಯಾನ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ಈವರೆಗೆ 61 ಟಿ20 ಪಂದ್ಯಗಳನ್ನಾಡಿದೆ. ಈ ವೇಳೆ ಭಾರತ ತಂಡವು 49 ಮ್ಯಾಚ್​ಗಳಲ್ಲಿ ಜಯ ಸಾಧಿಸಿದೆ. ಇದರೊಂದಿಗೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತೀ ಹೆಚ್ಚು ಪಂದ್ಯಗಳನ್ನು ಗೆದ್ದ ನಾಯಕನೆಂಬ ವಿಶ್ವ ದಾಖಲೆ ರೋಹಿತ್ ಶರ್ಮಾ ಪಾಲಾಗಿದೆ.

ಇನ್ನು ಜೂನ್ 29 ರಂದು ನಡೆಯಲಿರುವ ಟಿ20 ವಿಶ್ವಕಪ್​ನ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಿದರೆ, ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 50 ಪಂದ್ಯಗಳಲ್ಲಿ ಜಯ ಸಾಧಿಸಿದ ಮೊದಲ ನಾಯಕನೆಂಬ ಹೆಗ್ಗಳಿಕೆಗೆ ರೋಹಿತ್ ಶರ್ಮಾ ಪಾತ್ರರಾಗಲಿದ್ದಾರೆ. ಅದರಂತೆ ವಿಶ್ವ ಚಾಂಪಿಯನ್ ಪಟ್ಟದೊಂದಿಗೆ ಹಿಟ್​ಮ್ಯಾನ್ ನಾಯಕತ್ವದಲ್ಲೂ ಹೊಸ ದಾಖಲೆ ಬರೆಯಲಿದ್ದಾರಾ ಕಾದು ನೋಡಬೇಕಿದೆ.