SA vs WI: ವೆಸ್ಟ್ ಇಂಡೀಸ್ ಔಟ್: ಸೆಮಿಫೈನಲ್​ಗೆ ಸೌತ್ ಆಫ್ರಿಕಾ

T20 World Cup 2024: ಟಿ20 ವಿಶ್ವಕಪ್​ನ ಸೂಪರ್-8 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸೌತ್ ಆಫ್ರಿಕಾ ತಂಡ ರೋಚಕ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಸೌತ್ ಆಫ್ರಿಕಾ ತಂಡ ಸೆಮಿಫೈನಲ್​ಗೇರಿದರೆ, ವೆಸ್ಟ್ ಇಂಡೀಸ್ ತಂಡ ಟಿ20 ವಿಶ್ವಕಪ್​ನಿಂದ ಹೊರಬಿದ್ದಿದೆ. ಅಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ತಂಡದ ನಾಯಕ ಐಡೆನ್ ಮಾರ್ಕ್ರಾಮ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ.

ಆರಂಭಿಕ ಆಟಗಾರ ಶಾಯ್ ಹೋಪ್ (0) ಮೊದಲ ಓವರ್​ನಲ್ಲೇ ವಿಕೆಟ್ ಒಪ್ಪಿಸಿದರೆ, ಆ ಬಳಿಕ ಬಂದ ನಿಕೋಲಸ್ ಪೂರನ್ ಕೇವಲ 1 ರನ್​ಗಳಿಸಿ ನಿರ್ಗಮಿಸಿದರು. ಇದಾಗ್ಯೂ ಮತ್ತೊಂದೆಡೆ ಕೈಲ್ ಮೇಯರ್ಸ್ ಜವಾಬ್ದಾರಿಯುತ ಬ್ಯಾಟಿಂಗ್​ನೊಂದಿಗೆ 34 ಎಸೆತಗಳಲ್ಲಿ 35 ರನ್ ಬಾರಿಸಿದರು.

ಇನ್ನು ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ರೋಸ್ಟನ್ ಚೇಸ್ 42 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 3 ಫೋರ್​ಗಳೊಂದಿಗೆ 52 ರನ್ ಬಾರಿಸಿದರು. ಆದರೆ ಚೇಸ್ ಔಟಾಗುತ್ತಿದ್ದಂತೆ ದಿಢೀರ್ ಕುಸಿತಕ್ಕೊಳಗಾದ ವೆಸ್ಟ್ ಇಂಡೀಸ್ ತಂಡವು ಅಂತಿಮವಾಗಿ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು ಕೇವಲ 135 ರನ್​ಗಳಿಸಲಷ್ಟೇ ಶಕ್ತವಾಯಿತು.

ಓವರ್​ಗಳ ಕಡಿತ – 123 ರನ್​ಗಳ ಟಾರ್ಗೆಟ್:

ದ್ವಿತೀಯ ಇನಿಂಗ್ಸ್​ನ ಆರಂಭದಲ್ಲೇ ಮಳೆ ಬಂದಿದ್ದರಿಂದ ಕೆಲ ಹೊತ್ತು ಮ್ಯಾಚ್​ ಅನ್ನು ಸ್ಥಗಿತಗೊಳಿಸಲಾಯಿತು. ಆ ಬಳಿಕ ಓವರ್​ಗಳ ಕಡಿತದೊಂದಿಗೆ ಸೌತ್ ಆಫ್ರಿಕಾ ತಂಡಕ್ಕೆ 17 ಓವರ್​ಗಳಲ್ಲಿ 123 ರನ್​ಗಳ ಗುರಿ ನೀಡಲಾಯಿತು.

ಈ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ತಂಡ ಉತ್ತಮ ಆರಂಭ ಪಡೆದಿರಲಿಲ್ಲ. ರೀಝ ಹೆಂಡ್ರಿಕ್ಸ್ (0) ಶೂನ್ಯಕ್ಕೆ ಔಟಾದರೆ, ಕ್ವಿಂಟನ್ ಡಿಕಾಕ್ 12 ರನ್​ಗಳಿಸಿ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ಐಡೆನ್ ಮಾರ್ಕ್ರಾಮ್ 18 ರನ್​ಗಳ ಕೊಡುಗೆ ನೀಡಿದರು.

ಈ ಹಂತದಲ್ಲಿ ಜೊತೆಗೂಡಿದ ಹೆನ್ರಿಕ್ ಕ್ಲಾಸೆನ್ ಹಾಗೂ ಟ್ರಿಸ್ಟನ್ ಸ್ಟಬ್ಸ್ ಉತ್ತಮ ಜೊತೆಯಾಟ ಪ್ರದರ್ಶಿಸಿದರು. 10 ಎಸೆತಗಳಲ್ಲಿ 22 ರನ್ ಬಾರಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದ್ದ ಕ್ಲಾಸೆನ್ ವಿಕೆಟ್ ಪಡೆಯುವಲ್ಲಿ ಕೊನೆಗೂ ಅಲ್ಝಾರಿ ಜೋಸೆಫ್ ಯಶಸ್ವಿಯಾದರು.

ಇದರ ಬೆನ್ನಲ್ಲೇ ಡೇವಿಡ್ ಮಿಲ್ಲರ್ (4) ರೋಸ್ಟನ್ ಚೇಸ್ ಎಸೆತದಲ್ಲಿ ಬೌಲ್ಡ್ ಆದರೆ, ಟ್ರಿಸ್ಟನ್ ಸ್ಟಬ್ಸ್ (29) ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿದರು. ಪರಿಣಾಮ ಕೊನೆಯ 3 ಓವರ್​ಗಳಲ್ಲಿ ಸೌತ್ ಆಫ್ರಿಕಾ ತಂಡಕ್ಕೆ ಗೆಲ್ಲಲು 19 ರನ್​ಗಳ ಅವಶ್ಯಕತೆಯಿತ್ತು.

15ನೇ ಓವರ್​ ಎಸೆದ ಅಲ್ಝಾರಿ ಜೋಸೆಫ್ ಕೇವಲ 6 ರನ್ ಮಾತ್ರ ನೀಡಿದರು. ಅದರಂತೆ ಕೊನೆಯ 12 ಎಸೆತಗಳಲ್ಲಿ 13 ರನ್​ಗಳು ಬೇಕಿತ್ತು. ಈ ವೇಳೆ ದಾಳಿಗಿಳಿದ ರೋಸ್ಟನ್ ಚೇಸ್ ಕೇಶವ್ ಮಹಾರಾಜ್ (2) ವಿಕೆಟ್ ಪಡೆದರು. ಇನ್ನು ಕೊನೆಯ ಎಸೆತದಲ್ಲಿ ಕಗಿಸೊ ರಬಾಡ ಫೋರ್ ಬಾರಿಸುವ ಮೂಲಕ ಪಂದ್ಯವನ್ನು ರೋಚಕ ಘಟ್ಟದತ್ತ ಕೊಂಡೊಯ್ದರು.

ಅದರಂತೆ ಅಂತಿಮ ಓವರ್​ನಲ್ಲಿ ಸೌತ್ ಆಫ್ರಿಕಾ ತಂಡಕ್ಕೆ ಕೇವಲ 5 ರನ್​ಗಳ ಅವಶ್ಯಕತೆಯಿತ್ತು. ಒಬೆಡ್ ಮಕಾಯ್ ಎಸೆದ ಕೊನೆಯ ಓವರ್​ನ ಮೊದಲ ಎಸೆತದಲ್ಲೇ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ಮಾರ್ಕೊ ಯಾನ್ಸೆನ್ ಸೌತ್ ಆಫ್ರಿಕಾ ತಂಡಕ್ಕೆ 3 ವಿಕೆಟ್​ಗಳ ರೋಚಕ ಜಯ ತಂದುಕೊಟ್ಟರು.

ವೆಸ್ಟ್ ಇಂಡೀಸ್- 135/8 (20)

 (ಸೌತ್ ಆಫ್ರಿಕಾ 17 ಓವರ್​ಗಳ ಇನಿಂಗ್ಸ್​)

ಸೌತ್ ಆಫ್ರಿಕಾ- 124/7 (16.1)

ವೆಸ್ಟ್ ಇಂಡೀಸ್ ಪ್ಲೇಯಿಂಗ್ 11: ಕೈಲ್ ಮೇಯರ್ಸ್ , ಶಾಯ್ ಹೋಪ್ , ನಿಕೋಲಸ್ ಪೂರನ್ (ವಿಕೆಟ್ ಕೀಪರ್) , ರೋಸ್ಟನ್ ಚೇಸ್ , ರೋವ್​ಮನ್ ಪೊವೆಲ್ (ನಾಯಕ) , ಶೆರ್ಫೇನ್ ರುದರ್ಫೋರ್ಡ್ , ಆ್ಯಂಡ್ರೆ ರಸೆಲ್ , ಅಕೆಲ್ ಹೋಸೇನ್ , ಅಲ್ಝಾರಿ ಜೋಸೆಫ್ , ಗುಡಕೇಶ್ ಮೋಟಿ , ಒಬೆಡ್ ಮೆಕಾಯ್.

ಸೌತ್ ಆಫ್ರಿಕಾ ಪ್ಲೇಯಿಂಗ್ 11: ರೀಝ ಹೆಂಡ್ರಿಕ್ಸ್ , ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್) , ಐಡೆನ್ ಮಾರ್ಕ್ರಾಮ್ (ನಾಯಕ) , ಹೆನ್ರಿಕ್ ಕ್ಲಾಸೆನ್ , ಡೇವಿಡ್ ಮಿಲ್ಲರ್ , ಟ್ರಿಸ್ಟನ್ ಸ್ಟಬ್ಸ್ , ಮಾರ್ಕೊ ಯಾನ್ಸೆನ್ , ಕೇಶವ್ ಮಹಾರಾಜ್ , ಕಗಿಸೊ ರಬಾಡ , ಅನ್ರಿಕ್ ನೋಕಿಯಾ, ತಬ್ರೇಝ್ ಶಂಸಿ.