ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಮುಂದುವರೆದ ಮಳೆ ಆರ್ಭಟ

ಉಡುಪಿ, ಜೂನ್​ 28: ಪಶ್ಚಿಮ ಘಟ್ಟದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕುಮಾರಧಾರಾ, ಕಾವೇರಿ, ತುಂಗಾ, ಲಕ್ಷ್ಮಣತೀರ್ಥ, ಸುವರ್ಣಾ ಸೇರಿ ಹಲವು ನದಿಗಳ ನೀರಿನ ಮಟ್ಟ ಏರಿಕೆಯಾಗಿದ್ದು, ಪ್ರವಾಹದ ಆತಂಕ ಶುರುವಾಗಿದೆ. ಸಮುದ್ರ ತೀರದಲ್ಲೂ ಕಡ ಲ್ಗೊರೆತ ಹೆಚ್ಚಾಗಿದ್ದು, ಅಪಾಯದಂಚಿನಲ್ಲಿರುವ ಮನೆಗಳ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ಮಳೆಯಿಂದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅನಾಹುತ ಸಂಭವಿಸಿದ್ದು, ಇಲ್ಲಿದೆ ಮಾಹಿತಿ.

ಭಾರಿ ಮಳೆಗೆ ಕುಸಿದ ಬಾವಿ, ತಪ್ಪಿದ ಭಾರಿ ಅನಾಹುತ

ಭಾರಿ ಮಳೆಗೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದಲ್ಲಿ ಮನೆಯ ಪಕ್ಕದಲ್ಲೇ ಇದ್ದ ಬಾವಿ ಕುಸಿತವಾಗಿದೆ. ಅದೃಷ್ಟವಶಾತ್​ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬಾವಿ ಕುಸಿಯುವ ದೃಶ್ಯ ಮೊಬೈಲ್​​ ಕ್ಯಾಮರಾದಲ್ಲಿ ಸೆರೆಯಾಗಿದೆ.

ಅಗ್ನಿವೀರ್ ಸೇನಾ ರ‍್ಯಾಲಿಗೆ ಮಳೆ ಅಡ್ಡಿ

ಮಡಿಕೇರಿ‌ ನಗರದಲ್ಲಿ ಗುರುವಾರ (ಜೂ.28) ರಂದು ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಅಗ್ನಿವೀರ್ ಸೇನಾ ನಡೆಯಬೇಕಿತ್ತು. ಆದರೆ ಮಳೆಯಿಂದಾಗಿ ಈ ಮೈದಾನದಲ್ಲಿ ನಡೆಯಬೇಕಿದ್ದ ರ‍್ಯಾಲಿಯನ್ನು ಶನಿವಾರಕ್ಕೆ (ಜೂ.29) ಮುಂದೂಡಲಾಗಿದೆ. ರ‍್ಯಾಲಿ ನಡೆಯಬೇಕಿದ್ದ ಕ್ರೀಡಾಂಗಣವನ್ನೂ ಬದಲಾವಣೆ ಮಾಡಲಾಗಿದೆ. ಸದ್ಯ ನಗರದ ಸಾಯಿ ಹಾಕಿ ಟರ್ಫ್ ಗ್ರೌಂಡ್​ನಲ್ಲಿ ರ‍್ಯಾಲಿ ನಡೆಯುತ್ತಿದೆ. ಐದು ದಿನಗಳ‌ ಕಾಲ ರ‍್ಯಾಲಿ ನಡೆಯುತ್ತಿದೆ.

ಮಳೆಗೆ ಧರಾಶಾಹಿಯಾದ ಬೃಹದಾದ ತಡೆಗೋಡೆ

ಭಾರಿ ಮಳೆಗೆ ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಮರವೂರು ಸಮೀಪದ ಅಂತೋನಿ ಕಟ್ಟೆ ಬಳಿ ಸೆವರಿನ್ ಪಿಂಟೋ ಎಂಬವರಿಗೆ ಸೇರಿದ ಜಾಗದಲ್ಲಿ ನಿರ್ಮಸಿದ್ದ ಬೃಹದಾದ ತಡೆಗೋಡೆ ಧರಾಶಾಹಿಯಾಗಿದೆ. ತಡೆಗೋಡೆ ಪಕ್ಕದಲ್ಲೇ ಇದ್ದ ಎರಡು ಮನೆಗಳ ಮೇಲೆ ತಡಗೋಡೆಯ ಅವಶೇಷಗಳು ಬಿದ್ದಿವೆ. ಅದೃಷ್ಟವಶಾತ್ ಮನೆಯೊಳಗಿದ್ದ ನಾಲ್ಕು ಜನ ಪ್ರಾಣಪಾಯದಿಂದ ಪಾರಾಗಿದ್ದಾರೆ. ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಘಟನೆ ನಡೆದಿದೆ.

ಘಟನೆ ನಡೆದ ಸ್ಥಳಕ್ಕೆ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಭೇಟಿ ನೀಡಿ ಎರಡು ಮನೆಗೂ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಕುಸಿದು ಬಿದ್ದಿರುವ ಬೃಹದಾದ ತಡೆಗೋಡೆ ತೆರವಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹೆಬ್ಬಾಳೆ ಸೇತುವೆ ಬಹುತೇಕ ಮುಳುಗಡೆ

ಚಿಕ್ಕಮಗಳೂರು ನಗರ ಸೇರಿ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದೆ. ಭಾರಿ ಮಳೆಯಿಂದ ವಿವಿಧ ಪ್ರದೇಶಗಳು ಜಲಾವೃತಗೊಂಡಿವೆ. ಕುದುರೆಮುಖ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆಯಾದ ಪರಿಣಾಮ ಭದ್ರಾ ನದಿ ಉಕ್ಕಿ ಹರಿಯುತ್ತಿದೆ. ಇದರಿಂದ ಕಳಸ-ಹೊರನಾಡು ನಡುವೆ ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ ಬಹತೇಕ ಮುಳುಗಡೆಯಾಗಿದೆ. ಹೆಬ್ಬಾಳೆ ಸೇತುವೆ ಸಂಪೂರ್ಣ ಮುಳುಗಡೆಗೆ 2 ಅಡಿಯಷ್ಟೇ ಬಾಕಿ ಇದೆ. ಕಳಸ-ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದ ಮಾರ್ಗವೂ ಬಂದ್ ಆಗಲಿದೆ. ಶೃಂಗೇರಿ ತಾಲೂಕಿನಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ತುಂಗಾ ನದಿ ಒಳ ಹರಿವಿನ ನೀರಿನ ಪ್ರಮಾಣದಲ್ಲೂ ಏರಿಕೆಯಾಗಿದೆ.

ಸಮುದ್ರ ಪಾಲಾದ ಮನೆ

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಉಚ್ಚಿಲ ಬಟ್ಟಪಾಡಿಯಲ್ಲಿನ ಮನೆ ಸಮುದ್ರ ಪಾಲಾಗಿದೆ. ಮನೆ ಸಮುದ್ರ ಪಾಲಾಗುವ ಭೀಕರ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಜಿಲ್ಲಾಡಳಿತ ಮನೆ ಮಂದಿಯನ್ನ ಬೇರೆಡೆ ಸ್ಥಳಾಂತರಿಸಿದೆ. ಇನ್ನೂ ಅನೇಕ ಮನೆಗಳು ಅಪಾಯದಂಚಿನಲ್ಲಿವೆ.

ಮಣ್ಣು ಕುಸಿತ ಆರು ಮನೆಗಳಿಗೆ ಅಪಾಯ

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಕಾವೂರು ಸೂಜಿಕಲ್ ಗುಡ್ಡೆ ಎಂಬಲ್ಲಿ ನಿರ್ಮಾಣ ಹಂತದ ಕಟ್ಟಡದ ಬಳಿ ಏಕಾಏಕಿ ಮಣ್ಣು ಕುಸಿತಗೊಂಡಿದೆ. ಮಣ್ಣು ಕುಸಿತದಿಂದ ಆರು ಮನೆಗಳು ಅಪಾಯದಲ್ಲಿ ಸಿಲುಕಿವೆ. ಕಟ್ಟಡ ನಿರ್ಮಾಣಕ್ಕಾಗಿ ಗುಡ್ಡ ಅಗೆದಿರುವುದರಿಂದ ಸಮಸ್ಯೆ ಸೃಷ್ಟಿಯಾಗಿದೆ. ಘಟನಾ ಸ್ಥಳಕ್ಕೆ ದಕ್ಷಿಣ ಕನ್ನಡ ಡಿಸಿ ಮುಲ್ಲೈ ಮುಗಿಲನ್ ಭೇಟಿ ನೀಡಿ ಖಾಸಗಿ ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಗಿತಗೊಳಿಸಬೇಕು, ಕಟ್ಟಡ ಮಾಲೀಕರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಮಂಗಳೂರು ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.