‘ಕನ್ನಡ ಹಿಂದೆಂದಿಗಿಂತಲೂ ಇಂದು ಸಂಕಷ್ಟದಲ್ಲಿದೆ’ ಡಾ. ರಂಗನಾಥ ಅಭಿಮತ

ಹೊನ್ನಾವರ: ಜ್ಞಾನಪೀಠ ಪಶಸ್ತಿ ಪುರಸ್ಕೃತರು, ನವ್ಯಸಾಹಿತ್ಯ ಪಂಥದ ಹರಿಕಾರರೂ ಆದ ಡಾ. ವಿ. ಕೃ ಗೋಕಾಕ್ ಅವರು ಪಠ್ಯಪುಸ್ತಕಗಳಲ್ಲಿ ಹಿನ್ನೆಲೆಗೆ ಸರಿದಿದ್ದರೂ ‘ಗೋಕಾಕ್ ಚಳುವಳಿ’ಯಿಂದಾಗಿ ಕನ್ನಡ ನಾಡಿನಲ್ಲಿ ಅವರು ಎಂದಿಗೂ ಜೀವಂತವಾಗಿ ಉಳಿದಿದ್ದಾರೆ ಎಂದು ಚಿಂತಕ, ಕನ್ನಡ ಪ್ರಾಧ್ಯಾಪಕ, ಡಾ. ರಂಗನಾಥ ಕಂಟನಕುಂಟೆ ಅಭಿಪ್ರಾಯಪಟ್ಟರು.

ಅವರು ಹೊನ್ನಾವರದ ಎಸ್. ಡಿ. ಎಂ. ಪದವಿ ಕಾಲೇಜಿನ ಕನ್ನಡ ಸಂಘ ಮತ್ತು ವಿನಾಯಕ ಗೋಕಾಕ್ ವಾಙ್ಮಯ ಟ್ರಸ್ಟ್, ಬೆಂಗಳೂರು ಇವರ ಸಹಯೋಗದಲ್ಲಿ ಡಾ. ವಿ. ಕೃ. ಗೋಕಾಕ್ ಜನ್ಮದಿನಾಚರಣೆ ಪ್ರಯುಕ್ತ ಕಾಲೇಜಿನಲ್ಲಿ ನಡೆದ ವಿಶೇಷ ಉಪನ್ಯಾಸ ಮತ್ತು ಕಾವ್ಯಶ್ರಾವಣ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತ ಮಾತನಾಡಿದರು.

1982ರ ಹೊತ್ತಿಗೆ ನಡೆದ ಗೋಕಾಕ್ ಚಳುವಳಿ ಒಂದು ಮಾದರಿ ಚಳುವಳಿ. ಅದು ಎಲ್ಲಾ ವಯೋಮಾನದವರು ಸೇರಿ ಕನ್ನಡದ ಅಸ್ಮಿತೆಯ ಪುನರ್‍ಸ್ಥಾಪನೆಗಾಗಿ ಹೋರಾಡಲು ಜನಮಾನಸವನ್ನು ಪ್ರೇರೇಪಿಸಿದ ಚಳುವಳಿ. ವಿಶ್ವವಿದ್ಯಾಲಯಗಳ ಸುತ್ತೋಲೆಗಳಲ್ಲಿ, ಪಠ್ಯಗಳಲ್ಲಿ ಕನ್ನಡ ಭಾಷಾ ಶುದ್ಧಿಯ ಕೊರತೆ ಕಂಡುಬರುತ್ತಿದೆ. ಅಡಿಗೆಮನೆಯಲ್ಲಿಯೂ ಕಾಣೆಯಗುತ್ತಿರುವ ಕನ್ನಡದ ಕುರಿತು ನಾವು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ ಎಂದರು. ಇಂದು ಕನ್ನಡ ಹಿಂದೆಂದಿಗಿಂತಲೂ ಸಂಕಷ್ಟದಲ್ಲಿದೆ. ಹಾಗಾಗಿ ಇಂದು ಕನ್ನಡದ ಉಳಿವಿಗೆ ಗೋಕಾಕ್ ಮಾದರಿಯ ಚಳುವಳಿ ಅವಶ್ಯಕತೆಯಿದೆ ಎಂದರು.

ವಿ. ಕೃ ಗೋಕಾಕ್ ಟ್ರಸ್ಟ್ ನ ಸದಸ್ಯರೂ ಆಗಿರುವ ನಾಗರಾಜ ಹೆಗಡೆ ಅಪಗಾಲ ಪ್ರಾಸ್ತಾವಿಕವಾಗಿ ಮಾತನಾಡಿ ಟ್ರ್ರಸ್ಟಿನ ಅಧ್ಯಕ್ಷರಾದ ಬಿ. ಎಸ್. ವಿಶ್ವನಾಥ್, ಕಾರ್ಯದರ್ಶಿ ಅನಿಲ್ ಗೋಕಾಕ್, ನ. ರವಿಕುಮಾರ್ ಹಾಗೂ ಟ್ರಸ್ಟಿನ ಹಿರಿಯ ಸಲಹೆಗಾರರಾದ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಮಾರ್ಗದರ್ಶನ ಮತ್ತು ಸಹಕಾರವನ್ನು ಸ್ಮರಿಸಿದರು.

ನಂತರ ನಡೆದ ಕಾವ್ಯಶ್ರಾವಣ ಕಾರ್ಯಕ್ರಮದಲ್ಲಿ ಡಾ. ಎನ್. ಆರ್. ನಾಯಕ, ಡಾ. ಶ್ರೀಪಾದ ಶೆಟ್ಟಿ, ಸರಸ್ವತಿ ಗಂಗೊಳ್ಳಿ, ಕೃಷ್ಣಮೂರ್ತಿ ಹೆಬ್ಬಾರ, ನಾರಾಯಣ ಹೆಗಡೆ ಕರ್ಕಿ, ಪ್ರಶಾಂತ ಮೂಡಲಮನೆ, ವಿದ್ಯಾಧರ ಕಡತೋಕ ಹಾಗೂ ಕಾಲೇಜಿನ ವಿದ್ಯಾರ್ಥಿ ಕವಿಗಳು ಕವಿತೆ ವಾಚಿಸಿದರು. ಪ್ರಾಚಾರ್ಯರಾದ ಡಾ. ವಿಜಯಲಕ್ಷ್ಮಿ ಎಂ. ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.